ವೀರಪ್ಪ ಮರಳವಾಡಿಯವರು ಚಲನಚಿತ್ರ ದೂರದರ್ಶನ ಮತ್ತು ಸಾಕ್ಷ್ಯಚಿತ್ರ ಕ್ಷೇತ್ರದಲ್ಲಿ ಲೇಖಕರಾಗಿ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ರಾಮನಗರ ಜಿಲ್ಲೆ ಕನಕಪುರ ತಾಲೂಕು ಮರಳವಾಡಿಯವರು. ಶಿಕ್ಷಣದ ನಂತರ ಎನ್.ಜಿ.ಇ.ಎಫ್ ಕಾರ್ಖಾನೆಯಲ್ಲಿ ವೃತ್ತಿ ತರಬೇತಿ ಪಡೆದ ಇವರು ಹರ್ಬಟ್ ಇಂಡಿಯಾ ಎಂಬ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿದರು. ರಂಗಭೂಮಿ ಪ್ರತಿಭೆ. ಹಲವಾರು ನಾಟಕಗಳಲ್ಲಿ ನಟಿಸುವುದಲ್ಲದೆ ನಿರ್ದೇಶನವನ್ನೂ ಸಹ ಮಾಡಿರುತ್ತಾರೆ. ಚಿತ್ರರಂಗವನ್ನೂ ಪ್ರವೇಶಿಸಿದರು. ಈ ವೇಳಗಾಗಲೆ ಸಾಕಷ್ಟು ರಂಗಭೂಮಿ ಅನುಭವ ಹೊಂದಿದ್ದ ಅವರು ಚಿತ್ರರಂಗದಲ್ಲಿ ಲೇಖಕನಾಗಿ ಗುರುತಿಸಿಕೊಂಡರು. ಹಲವಾರು ಚಿತ್ರಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಒದಗಿಸಿದರು. ಒಂದು ಚಿತ್ರವನ್ನೂ ಬರೆದು ನಿರ್ದೇಶಿಸಿದ್ದಾರೆ. ಹಲವು ಚಲನಚಿತ್ರ ಮತ್ತು ನಾಟಕ ತರಬೇತಿ ಶಾಲೆಗಳಲ್ಲಿ ವಿಶೇಷ ಉಪನ್ಯಾಸಗಳನ್ನು ನೀಡಿರುತ್ತಾರೆ. ವಿಚಾರ ಸಂಕಿರಣಗಳಲ್ಲಿ ಸಮಾವೇಶಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪತ್ರಿಕೋದ್ಯಮ ಪದವಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಶಿಬಿರ ಮತ್ತು ಚಲನಚಿತ್ರಕ್ಕೆ ಸಂಬಂಧಿಸಿದ ಕಾರ್ಯಾಗಾರ ಮತ್ತು ಶಿಬಿರಗಳ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಬಹುಸಂಖ್ಯೆಯ ಸಾಕ್ಷ್ಯಚಿತ್ರಗಳನ್ನು ಇವರು ರೂಪಿಸಿದ್ದಾರೆ. ಕನ್ನಡ ನಾಡು ನುಡಿ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯುಳ್ಳ ಅವರು ಇತ್ತೀಚೆಗೆ ಆ ವಿಷಯಗಳನ್ನೆ ಕುರಿತು ವಿವಿಧ ಸಂಸ್ಥೆಗಳಿಗೆ ಸಾಕ್ಷ್ಯಚಿತ್ರಗಳನ್ನು ರೂಪಿಸಿರುವುದು ವಿಶೇಷ. ಕವಿರಾಜಮಾರ್ಗ, ಕುವೆಂಪು, ವಚನಕಾರರು, ಕನ್ನಡ ಭಾಷೆಯ ವಿವಿಧ ಅವಸ್ಥಾಂತರಗಳು, ಕನ್ನಡ ಮತ್ತು ಇತರ ಭಾಷೆಯ ಸಂಬಂಧಗಳು ಅಂತಹ ಕೆಲವು ಸಾಕ್ಷ್ಯಚಿತ್ರಗಳನ್ನು ರಚಿಸಿದ್ದಾರೆ.
ವಿವಿಧ ಉದ್ದೇಶಗಳಿಗಾಗಿ ವಿವಿಧ ಕಾರ್ಯಕ್ರಮಗಳ ಕನ್ನಡೀಕರಣದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತದಲ್ಲಿ ಆಸಕ್ತಿಯುಳ್ಳ ಅವರು ಹಲವು ಸಂಗೀತಮಯ ಕಾರ್ಯಕ್ರಮಗಳನ್ನು ಕೂಡ ರೂಪಿಸಿದ್ದಾರೆ. ವಾಣಿಜ್ಯ ಜಿಂಗಲ್‌ಗಳನ್ನು ಸಹ ಇವರು ಬರೆದಿದ್ದಾರೆ ಮತ್ತು ರೂಪಿಸಿದ್ದಾರೆ. ಬಹುಮುಖ ಪ್ರತಿಭೆಯ ಅವರು ಸದಾ ಕ್ರೀಯಾಶೀಲರಾಗಿದ್ದು ಸಧ್ಯ ಸಾಕ್ಷ್ಯಚಿತ್ರ ಕ್ಷೇತ್ರದಲ್ಲಿ ತಮ್ಮನ್ನು ಪ್ರಮುಖವಾಗಿ ತೊಡಗಿಸಿಕೊಂಡಿದ್ದಾರೆ. ವಚನ ಸಾಹಿತ್ಯದಲ್ಲಿ ಬಹು ಆಸ್ಥೆಯುಳ್ಳ ಅವರು ಸಮಕಾಲೀನ ವಚನಕಾರರೂ ಆಗಿದ್ದಾರೆ.