ವಿದ್ಯಾ ಗಣೇಶ್ (ವಿದ್ಯಾಲಕ್ಷ್ಮೀ) ಅವರು ಜನಿಸಿದ್ದು 1958ರ ಮೇ 25 ರಂದು ಉಡುಪಿಯಲ್ಲಿ. ತಂದೆ ಶೇಷಗಿರಿ ಹಾಲಂಬಿ, ತಾಯಿ ಇಂದಿರಾ ಹಾಲಂಬಿ. ಬಿ.ಕಾಂ. ಪದವೀಧರೆ ಯಾಗಿದ್ದು ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇಪ್ಪತ್ತೆಂಟು ವರ್ಷ ಉದ್ಯೋಗಿಯಾಗಿ ಇತ್ತೀಚೆಗೆ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಸಾಹಿತ್ಯ ಪ್ರೀತಿಯನ್ನು ತಾಯಿಯ ಒಡನಾಟ, ಪ್ರೇರಣೆಗಳಿಂದ ಮೊದಲಿನಿಂದಲೂ ಬೆಳೆಸಿಕೊಂಡ ಇವರಿಗೆ ಉತ್ತಮ ಪುಸ್ತಕಗಳನ್ನು ಓದುವುದರಲ್ಲಿ ಅತೀವ ಆಸಕ್ತಿ, ಅಲ್ಲದೆ ನಾಡಿನ ಅನೇಕ ಪ್ರಮುಖ ಪತ್ರಿಕೆಗಳಲ್ಲಿ ಇವರ ಕತೆ, ಕವನ, ಲೇಖನಗಳು ಪ್ರಕಟವಾಗುತ್ತಿವೆ. ಮಂಗಳೂರು ಆಕಾಶವಾಣಿಯಲ್ಲಿ ಕವನಗಳು ಪ್ರಸಾರವಾಗಿವೆ. ಇವರ ಸ್ವಂತ ಪ್ರಕಟಿತ ಕೃತಿಗಳು 'ಒಳಹೊರಗಿನ ದನಿ', 'ಚಿತ್ತಚೇತನ' (ಕವನ ಸಂಕಲನ) 'ಸಹಜೀವನ', 'ಆಶಾಸೌಧದ ಆಚೆಈಚೆ' (ಕಿರುನಾಟಕಗಳು) “ಬಗೆಯೊಡಲ ಬಣ್ಣಗಳು' (ಕಥಾಸಂಕಲನ) 'ಪಂಚಪ್ರವಾಸಗಳು' (ಪ್ರವಾಸ ಕಥನ). ಹಲವಾರು ಸಂಪಾದಿತ ಕೃತಿಗಳಲ್ಲಿ ಇವರ ಕತೆ, ಕವನ, ಲೇಖನ, ಮಕ್ಕಳಿಗಾಗಿ ಕತೆಗಳು ಪ್ರಕಟವಾಗಿವೆ. ಕರಾವಳಿ ಲೇಖಕಿ ವಾಚಕಿಯರ ಸಂಘ (ರಿ) ಇದರ ಆಜೀವ ಸದಸ್ಯೆಯಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ 'ಕನ್ನಡ ಜಾಣ' ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ, ಹಿಂದಿ ರಾಷ್ಟ್ರಭಾಷಾ ಪರೀಕ್ಷೆಯಲ್ಲಿ ಉತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈಗ ಸಂಸ್ಕೃತ ಭಾಷಾಭ್ಯಾಸದಲ್ಲಿ ತೊಡಗಿ ಕೊಂಡಿದ್ದಾರೆ. ಸುರ ಸರಸ್ವತೀಸಭಾ ಶೃಂಗೇರಿ ಮತ್ತು ಸಂಸ್ಕೃತ ಭಾರತೀಯವರು ನಡೆಸುವ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ಶಿಕ್ಷಣ ಮುಂದುವರಿಸಿದ್ದಾರೆ. ಇವರು ಸದ್ಯ ಮಂಗಳೂರು ಅಶೋಕನಗರದ ನಿವಾಸಿ.