ಲೇಖಕಿ, ಕವಯಿತ್ರಿ, ಅಂಕಣಕಾರ್ತಿ, ಚಿತ್ರ ನಿರ್ದೇಶಕಿ, ಇತಿಹಾಸ ತಜ್ಞೆ ಹಾಗೂ ಸಂಸ್ಕೃತಿ ಚಿಂತಕಿ ಡಾ.ಎಂ.ವಿ. ವಸು ಆವರು ’ವಸು ಮಳಲಿ’ ಎಂದೇ ಚಿರಪರಿಚಿತರು. ಹಿರಿಯ ಸಾಹಿತಿ ಮಳಲಿ ವಸಂತಕುಮಾರ್ ಅವರ ಪುತ್ರಿ. 1967ರ ಫೆಬ್ರವರಿ 7ರಂದು ಜನಿಸಿದರು. ಖ್ಯಾತ ಫೋಟೋಗ್ರಾಫರ್ ರನ್ನ ಎಂ.ವಿ. ಇವರ ಸಹೋದರ. ವಸು ಮಳಲಿ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಗೆದ್ದಿದ್ದ ಅವರು ವಿಶ್ವವಿದ್ಯಾಲಯ ಖೋಖೋ ತಂಡದ ನಾಯಕಿಯೂ ಆಗಿದ್ದರು.
ತುಮಕೂರು ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದ ಅವರು 1998ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಸೇರಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಅವರು ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ವಾಸವಾಗಿದ್ದರು.
’ಕನ್ನಡ ಮೌಖಿಕ ಇತಿಹಾಸ', 'ದಕ್ಷಿಣ ಕರ್ನಾಟಕದ ಅರಸು ಮನೆತನಗಳು', 'ಕರ್ನಾಟಕ ಚರಿತ್ರೆಯ ಆಯ್ದ ವಿಷಯಗಳು', 'ಭಾರತ ಚರಿತ್ರೆಯ ಆಯ್ದ ವಿಷಯಗಳು' ಎಂಬ ಕೃತಿಗಳನ್ನುಪ್ರಕಟಿಸಿದ್ದಾರೆ. ’ಕನ್ನಡದೊಳ್ ಭಾವಿಸಿದ ಜನಪದಂ' ಎಂಬ ಕೃತಿಯನ್ನು ಸಂಪಾದಿಸಿದ್ದರು, ಪ್ರಜಾವಾಣಿಯಲ್ಲಿ 'ಕಳ್ಳುಬಳ್ಳಿ' ಆಂಕವನ್ನು ಬರೆಯುತ್ತಿದ್ದರು. ಇತಿಹಾಸದ ಕುರಿತ ಹೊಸ ಹೊಳಹುಗಳನ್ನು ಕಟ್ಟಿಕೊಟ್ಟಿದ್ದ ಅವರ ಲೇಖನಗಳು ಕರ್ನಾಟಕದ ಇತಿಹಾಸವನ್ನು ಹೊಸ ಬಗೆಯಲ್ಲಿ ಅಧ್ಯಯನ ಮಾಡಬೇಕಾದ ಅಗತ್ಯವನ್ನು ಹೇಳುತ್ತವೆ. ಚರಿತ್ರೆಯನ್ನು ಅಧ್ಯಯನ ಮಾಡಲು ಮೌಖಿಕ ಆಕರಗಳನ್ನು ಬಳಸಲು ಉತ್ಸುಕರಾಗಿದ್ದ ಅವರು ಉತ್ತಮ ವಾಗ್ಮಿಗಳೂ ಆಗಿದ್ದರು.
ಎಡಪಂಥೀಯ ಚಿಂತನೆಗಳು ಅವರ ಬರವಣಿಗೆಗೆ ಹೊಸ ಹೊಳಪನ್ನು ನೀಡಿದ್ದವು. ಪ್ರಗತಿಪರ ಚಳುವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ವಸು ಅವರು ಹೋರಾಟಗಾರುಗೆ ಸ್ಫೂರ್ತಿಯಾಗಿದ್ದರು.