ಲೇಖಕ ಡಾ. ತಿಮ್ಮಯ್ಯಶೆಟ್ಟಿ ಇಲ್ಲೂರು ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಮದರಕಲ್ ಗ್ರಾಮದವರು. ಎಂ.ಎ. (ಇತಿಹಾಸ) ಹಾಗೂ ಎಂ.ಇಡಿ ಪದವೀಧರರು. ಶಿಕ್ಷಣ ಶಾಸ್ತ್ರ ವಿಷಯದಲ್ಲಿ ಪಿ.ಹೆಚ್. ಡಿ. ಪದವಿ ಪಡೆದಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟಿಯ ಶ್ರೀ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪ-ಪ್ರಾಚಾರ್ಯರಾಗಿ ನಂತರ ಸದ್ಯ, ರಾಯಚೂರು ಜಿಲ್ಲೆಯ ಮಾನ್ವಿಯ ಶಾರದಾ ವಿದ್ಯಾನಿಕೇತನ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಾವ್ಯನಾಮ-ಮದರಕಲ್ಲ ಕಂದ. ಕಾವ್ಯ, ಮಕ್ಕಳ ಕಾವ್ಯ, ನಗರೇಶ್ವರ ಅಂಕಿತದಲ್ಲಿ ಆಧುನಿಕ ವಚನಗಳು, ಐತಿಹಾಸಿಕ ವ್ಯಕ್ತಿಗಳ ಜೀವನ ಚರಿತೆ ಆಧಾರಿತ ತ್ರಿಪದಿಗಳು, ಗಜಲ್, ಕಥೆ ಮತ್ತು ಲೇಖನಗಳನ್ನು ಬರೆದಿದ್ದಾರೆ. ಇವರ ಹಲವಾರು ಕವಿತೆಗಳು, ಬಿಡಿ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಪ್ರಸ್ತುತ ರಾಯಚೂರಿನಲ್ಲಿ ವಾಸವಾಗಿದ್ದಾರೆ.
ಕೃತಿಗಳು: ಬಾಲ್ಯಾವಸ್ಥೆ ಮತ್ತು ಬೆಳವಣಿಗೆ (ಶೈಕ್ಷಣಿಕ ಮನೋವಿಜ್ಞಾನ - 2016), ಕಲಿಕೆ ಮತ್ತು ಬೋಧನಾ ಪ್ರಕ್ರಿಯೆಯ ಮನೋವಿಜ್ಞಾನ (2019), ಭಾವನೆಗಳ ಗೊಂಚಲು (ಚುಟುಕು ಸಂಕಲನ-2019), ಧರಣಿ ಬೆಳಗಿದ ದೇವತೆ (ಕವನ ಸಂಕಲನ-2019) ಪ್ರಕಟಗೊಂಡಿವೆ. ಮರಗಳು ಮಾತಾಡಿದ್ರೆ (ಮುದ್ರಣ ಹಂತದಲ್ಲಿ ಮಕ್ಕಳ ಕವಿತೆಗಳು-2021), ‘ಮರಗಳು ಮಾತಾಡಿದ್ರೆ’ ಮಕ್ಕಳ ಕವಿತೆ ಕರ್ನಾಟಕ ಸಾಹಿತ್ಯ ಅಕಾಡೆಮಿ 2019ರ ವಾರ್ಷಿಕ ಮಕ್ಕಳ ಸಾಹಿತ್ಯ ಸಂಪುಟದಲ್ಲಿ ಆಯ್ಕೆಯಾಗಿದೆ.