ಪತ್ರಿಕಾರಂಗದಲ್ಲಿ ಐದೂವರೆ ದಶಕಗಳ ಕಾಲ ಸೇವೆ ಸಲ್ಲಿಸಿ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಲೇಖಕ, ಫೋಟೋಗ್ರಾಫರ್ ಟಿ.ಎಸ್. ಸತ್ಯನ್. 1923 ಡಿಸೆಂಬರ್ 18ರಂದು ಮೈಸೂರಿನಲ್ಲಿ ಜನನ. ಚಿಕ್ಕ ವಯಸ್ಸಿನಿಂದಲೇ ಛಾಯಾಚಿತ್ರ ಕಲೆ, ಪತ್ರಿಕೋದ್ಯಮಗಳಲ್ಲಿ ತೀವ್ರ ಆಸಕ್ತಿ ತಳೆದವರು.
ವಿಖ್ಯಾತ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿ1944ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಬಿ.ಎ ಪದವಿ ಪಡೆದ ಸತ್ಯನ್ ಅವರ ನಿಜಜೀವನದ ಛಾಯಾಚಿತ್ರಗಳೂ, ಲೇಖನಗಳೂ ಭಾರತದ ಹತ್ತಾರು ದೈನಿಕ, ಸಾಪ್ತಾಹಿಕ ಮತ್ತಿತರ ಪತ್ರಿಕೆಗಳಲ್ಲಿ ಮಾತ್ರವಲ್ಲದೆ, ಅಮೆರಿಕದ ಪ್ರತಿಷ್ಠಿತ ‘ಲೈಫ್’ ಹಾಗೂ ಇಂಗ್ಲೆಡ್ ಮತ್ತು ಐರೋಪ್ಯ ದೇಶಗಳ ಪ್ರಸಿದ್ಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಭಾರತದ ಬಹುತೇಕ ರಾಜ್ಯಗಳ ರಾಜಧಾನಿಗಳಲ್ಲಿ, ವಿದೇಶಗಳಲ್ಲಿ ಏರ್ಪಟ್ಟಿರುವ ಇವರ ಅನೇಕ ಚಿತ್ರ ಪ್ರದರ್ಶನಗಳ ಮೂಲಕ ಸತ್ಯನ್ ಕಲಾಭಿಜ್ಞರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
1979ರ ಅಂತಾರಾಷ್ಟ್ರೀಯ ಮಕ್ಕಳ ವರ್ಷದ ಸಂದರ್ಭದಲ್ಲಿ ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಕಾರ್ಯಕ್ರಮಗಳ ಅಂಗವಾಗಿ ಸತ್ಯನ್ ಅವರ ಮನಮೋಹಕ ಛಾಯಾ ಚಿತ್ರ ಪ್ರದರ್ಶನ ನಡೆಯಿತು. ಯೂನಿಸೆಫ್ ಮೊದಲಾದ ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಂಸ್ಥೆಗಳಿಗೆ ಸಲಹೆಗಾರರಾಗಿ ಕರ್ತವ್ಯ ನಿರ್ವಹಣೆ ಮಾಡಿರುವ ಇವರನ್ನು ಭಾರತ ಸರ್ಕಾರ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ(1977); ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ’(1980) ನೀಡಿದೆ.
ಕೃತಿಗಳು: ಕಾಲಕ್ಕೆ ಕನ್ನಡಿ, Exploring karnataka, German Vignettes