ಪತ್ರಕರ್ತೆ, ಲೇಖಕಿ ಟಿ.ಸಿ. ಪೂರ್ಣಿಮಾ ಅವರು 1963 ಜೂನ್ 3ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಟಿ.ವಿ. ಚಿಕ್ಕರಾಜ್, ತಾಯಿ ಛಾಯಾ. ಹಿಂದಿಯಲ್ಲಿ ಪಿಎಚ್‌ಡಿ ಪದವಿ ಪಡೆದಿರುವ ಇವರು ಪತ್ರಿಕೋದ್ಯಮ ಡಿಪ್ಲೊಮಾ ಶಿಕ್ಷಣ ಪಡೆದಿದ್ದಾರೆ.ಭಾರತೀಯ ಸಮಾಚಾರ ಸೇವೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು, ಸಾಹಿತ್ಯ ಕ್ಷೇತ್ರದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು.
ಪೂರ್ಣಿಮಾ ಅವರ ಪ್ರಮುಖ ಕೃತಿಗಳೆಂದರೆ ಭೂಮಿ ನನ್ನದಲ್ಲ, ಹಾದಿಬದೆಯ ಹದಿಬದೆ, ಮೌನಗೀತೆ (ಕಾವ್ಯ), ಗಾಂಧಿ, ನೀರಗುದುರೆಗೆ ರೋಮವಿದ್ದಾಗ, ಮಹಿಳೆಯರಲ್ಲಿ ಉದ್ಯಮಶೀಲತೆ (ಅನುವಾದ), ಕಾವೇರಿ ಮಡಿಲ ಕನಸುಗಾರ, ನಾದಲೋಲ, ಶ್ರೀಮತಿ ಸಾವಿತ್ರಮ್ಮ ದೇಜಗೌ (ಜೀವನ ಚರಿತ್ರೆ), ದಿಟದಮನೆ, ಹರಿವ ನದಿಗೆ ಸೀಮೆಯೇ?, ಆಧುನಿಕ ಮಾಧ್ಯಮಗಳು ಮತ್ತು ಭಾಷಾ ಅಭಿವೃದ್ಧಿ (ಸಂಶೋಧನೆ) ಮುಂತಾದವು.
ಆರ್ಯಭಟ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ವಾರಂಬಳ್ಳಿ ಬಹುಮಾನ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, ಜಿ.ಸುಬ್ಬಯ್ಯ ರಾಷ್ಟ್ರೀಯ ಬಹುಮಾನ, ಅಮ್ಮಾ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಬಹುಮಾನ, ಗುಡಿಬಂಡೆ ಪೂರ್ಣಿಮಾ ಪ್ರಶಸ್ತಿ, ಮುಂತಾದ ಹಲವಾರು ಪ್ರಶಸ್ತಿಗಳು ಪೂರ್ಣಿಮಾ ಅವರಿಗೆ ಸಂದಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ ಹಾಗೂ ಮೈಸೂರು ವಿಶ್ವವಿದ್ಯಾಲಯ ಅಧ್ಯಯನ ಮಂಡಳಿಯ ಸದಸ್ಯೆ, ಭಾರತೀಯ ವಿದ್ಯಾಭವನದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ತರಗತಿಗಳಿಗೆ ಅತಿಥಿ ಉಪನ್ಯಾಸಕಾರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೂರದರ್ಶನ 1ರ ಕನ್ನಡ ಸುದ್ದಿವಾಚಿಕೆಗಳ ಸಂಪಾದನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಇವರಿಗಿದೆ.