About the Author

ಸ್ತ್ರೀವಾದಿ ಚಿಂತಕಿ, ಬರಹಗಾರ್ತಿ ಸುಶಿ ಕಾಡನಕುಪ್ಪೆ ಅವರು ಜನಿಸಿದ್ದು 31 ಆಗಸ್ಟ್ 1980ರಲ್ಲಿ ತಂದೆ ಶಿವರಾಮು ಕಾಡನಕುಪ್ಪೆ, ತಾಯಿ ಸುವರ್ಣ ಕಾಡನಕುಪ್ಪೆ. 

ಡಾ. ಸುಶಿ ಕಾಡನಕುಪ್ಪೆ ಮೂಲತಃ ಮೈಸೂರಿನವರು. ಜೆಎಸ್ ಎಸ್ ದಂತ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಿಂದ (2003) ದಂತ ವೈದ್ಯಕೀಯ ಪದವಿ ಹಾಗೂ ಬೆಂಗಳೂರಿನ ದಿ. ಆಕ್ಸ್ ಫರ್ಡ್ ಡೆಂಟಲ್  ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಿಂದ ಎಂ.ಡಿ.ಎಸ್ ಪಡೆದರು. ಬೆಂಗಳೂರಿನ ಒಕ್ಕಲಿಗರ ಸಂಘದ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೃತ್ತಿ (2008) ಆರಂಭಿಸಿದರು. ದಂತ ಹಾಗೂ ಬಾಯಿ ರೋಗಗಳಿಗೆ ಸಂಬಂಧಿಸಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ (ವಿಷಯ: ಲೈಫ್ಮ ಕೋರ್ಸ್ ಎಪಿಡೆಮಿಯಾಲೊಜಿ ಆಫ್ ಕ್ರಾನಿಕ್ ಒರಲ್ ಡಿಸೀಜಸ್ ಅಮಾಂಗ್ ಅಡೊಲೆಸೆನ್ಸ್) ಪ್ರಬಂಧ ಸಲ್ಲಿಸಿ (2017) ಪಿಎಚ್ ಡಿ ಪಡೆದರು. 

ಭಾರತ ಸರ್ಕಾರದ ಕ್ರೀಡೆ ಹಾಗೂ ಯುವಜನ ವ್ಯವಹಾರಗಳ ಇಲಾಖೆಯಡಿ ರಾಜೀವಗಾಂಧಿ ರಾಷ್ಟ್ರೀಯ ಸಂಸ್ಥೆಯ ಯುವಜನ ಅಬಿವೃದ್ಧಿ ವಿಭಾಗದಲ್ಲಿ ಯುವಕರಿಗೆ ಜೀವನ ಕೌಶಲಗಳು, ವ್ಯಕ್ತಿ ಅಂತರ್ಗತ ಸಂಬಂಧಗಳು, ಸಂವಹನ ಕಲೆ, ಸೃಜನಾತ್ಮಕತೆ ಇತ್ಯಾದಿ ಕುರಿತು ಸಲಹೆ ನೀಡುವ ಬೋಧಕರೂ ಆಗಿದ್ದಾರೆ. ಈ ಕುರಿತು ಜಾಗೃತಿ ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ. 

ದಂತ ರೋಗಗಳಿಗೆ ಸಂಬಂಧಿಸಿದಂತೆ ಅವರು ಬರೆದ ಲೇಖನಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟವಾಗಿವೆ. ಈ ವಿಷಯಗಳಿಗೆ ಸಂಬಂಧಿಸಿ ಸುಮಾರು 20ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಶಿಕ್ಷಣ, ಆರೋಗ್ಯ, ಸಂಸ್ಕೃತಿ ಹಾಗೂ ಮಹಿಳೆಯರ ಸಮಸ್ಯೆಗಳು ಹಾಗೂ ಸಬಲೀಕರಣ ಇತ್ಯಾದಿ ವಿಷಯಗಳಡಿ ಹಲವು ಲೇಖನಗಳನ್ನು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬರೆದಿದ್ದಾರೆ.  ಕೋಮು ಸಾಮರಸ್ಯಕ್ಕಾಗಿ ನಡೆಯುವ ಹಲವಾರು ಹೋರಾಟಗಳಲ್ಲೂ ಸಕ್ರಿಯರು. ಅಸತ್ಯದ ಕೇಡು-ವೈಚಾರಿಕ ಬರೆಹಗಳ ಸಂಕಲನ ಹಾಗೂ ಫೆಮಿನಿಸಮ್ -ಸ್ತ್ರೀವಾದದ ಹುಟ್ಟು ಹಾಗೂ ರಚನೆ ಕುರಿತ ಕೃತಿಗಳನ್ನು ಬರೆದಿದ್ದಾರೆ. 

 

ಸುಶಿ ಕಾಡನಕುಪ್ಪೆ

(31 Aug 1980)