ರಾಯಚೂರು ಜಿಲ್ಲೆಯ ಮುದಗಲ್ಲಿನಲ್ಲಿ ಜನಿಸಿದ ಶ್ರೀನಿವಾಸ ದೇಶಪಾಂಡೆ ಅವರು ಅಲ್ಲಿಯೇ ಸಿವಿಲ್‌ನಲ್ಲಿ ಇಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿದರು. ಮುಂದೆ ಸ್ಥಿರಾಸ್ತಿ ಮೌಲ್ಯಮಾಪನದಲ್ಲಿ ಎಂ.ಎಸ್ಸಿ ಪದವಿಗಳಿಸಿ ಕರ್ಣಾಟಕ ಬ್ಯಾಂಕಿನ ಉದ್ಯೋಗಕ್ಕೆ ಅಂಟಿಕೊಂಡು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಬ್ಯಾಂಕಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿರುವ ದೇಶಪಾಂಡೆಯವರಿಗೆ ಸಾಹಿತ್ಯದ ಮೇಲಿನ ಒಲವು, ಕೈಂಕರ್ಯ ಹವ್ಯಾಸವೆಂಬಂತೆ ಪ್ರಾರಂಭವಾಗಿ ಓದು, ವಿಶ್ಲೇಷಣೆ, ಬರಹಗಳಿಗೆ ಬಂದು ನಿಂತಿರುವುದು ಅವರ ವ್ಯಕ್ತಿತ್ವದ ಸೋಜಿಗಗಳಲ್ಲೊಂದು. ಬಿಡುವು ಅಪರೂಪವಾದ ಬ್ಯಾಂಕಿನ ಕೆಲಸದ ನಡುವೆ ದೇಶವಿದೇಶಗಳ ಪ್ರವಾಸ ಮಾಡುತ್ತಾರೆ. ಅವರು ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸೂರ್ಯನಾರಾಯಣ ಅಡಿಗರನ್ನು ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಹಾಗೆಯೇ ಅವರು ಬರೆದ ಮಂಗಳೂರು ರಾಮಕೃಷ್ಣಮಠದ ಕಾರ್ಯ ಚಟುವಟಿಕೆಗಳನ್ನು ಕುರಿತ ಕೃತಿ ಪ್ರಕಟವಾಗಿದೆ.