ಪತ್ರಕರ್ತ ಶೇಷಮೂರ್ತಿ ಅವಧಾನಿ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣೂರು ಗ್ರಾಮದವರು. ಹುಟ್ಟೂರಿನಲ್ಲೇ ಹೈಸ್ಕೂಲ್ ವರೆಗೂ ಶಿಕ್ಷಣ, ಕಲಬುರಗಿಯಲ್ಲಿ ಬಿ.ಎಸ್.ಸಿ ಪದವಿ (ಭೂ ವಿಜ್ಞಾನ) ಪೂರ್ಣ. 1996ರಿಂದ ಪತ್ರಿಕೋದ್ಯಮಿಯಾಗಿ ಸೇವೆ ಆರಂಭ. ಸದ್ಯ, ಕನ್ನಡ ಪ್ರಭ ದಿನಪತ್ರಿಕೆಯ ಪ್ರಧಾನ ವರದಿಗಾರ. .
ಕೃತಿಗಳು: ಮನಸ್ಸೇ ಕೊಲೆಗಾರ (ಮೂರು ನಾಟಕಗಳ ಸಂಗ್ರಹ ಕೃತಿ), ಬಿಸಿಲನಾಡ ಬದುಕು (ವಿಮರ್ಶಾ ಲೇಖನಗಳ ಸಂಗ್ರಹ) ಭೀಮೆಯ ಒಡಲು (ವಿಮರ್ಶಾತ್ಮಕ ವರದಿಗಳ ಸಂಗ್ರಹ) , ಅಭಿವೃದ್ಧಿ ಅನ್ವೇಷಣೆಯಲ್ಲಿ (ಹೈ-ಕ ಪ್ರದೇಶ ಹಿಂದುಳಿದಿರುವಿಕೆ ಕುರಿತ ವಿಮರ್ಶಾತ್ಮಕ ವರದಿಗಳ ಸಂಗ್ರಹ) ವಂಡರ್ ಡೈರಿ (ಪತ್ರಿಕೋದ್ಯಮ ವೃತ್ತಿಯ ವಿಶೇಷ ಅನುಭವಗಳ ಕೃತಿ), ಪ್ರೆಸ್ ಮೀಟ್' (ಸುದ್ದಿಗೋಷ್ಠಿ ಸುತ್ತಮುತ್ತ ವಾರೆನೋಟ ಬರಹಗಳ ಕೃತಿ), 'ಮುಳುಗುವವನಿಗೆ ಹುಲ್ಲು ಕಡ್ಡಿ ಆಸರೆ' (ರೈತರ ಆತ್ಮಹತ್ಯೆ, ಬವಣೆಯ ಬದುಕು ಚಿತ್ರಿಸಿರುವ ನಾಟಕ- ಕಲಬುರಗಿ ಆಕಾಶವಾಣಿ ನಾಟಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ), 'ಖಿಲ್ಲಾದಾಗಿನ ಗಂಟು' (ಕಲಬುರಗಿ ಸಮೀಪದ ಸರಡಗಿಯಲ್ಲಿ ನಡೆದ ನಿಧಿಗಾಗಿನ ನರಬಲಿಯ ಪ್ರಸಂಗ ಆಧಾರಿತ ನಾಟಕ- ಕಲಬುರಗಿ ಬಾನುಲಿಯಲ್ಲಿ ಪ್ರೇಮ್ ಟೈಮ್‍ನಲ್ಲಿ ಪ್ರಸಾರವಾದ ನಾಟಕ), 'ಮನಸೇ ಕೊಲೆಗಾರ’ (ಕಲಬುರಗಿ ಕಂಡ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಸಂಗ ಆಧರಿತ ನಾಟಕಗಳ ಸಂಕಲನ).
ಪ್ರಶಸ್ತಿ-ಗೌರವಗಳು: ಚಿಂಚೋಳಿ ತಾಲೂಕಿನ ಹಸರಗುಂಡಗಿ, ಗುರಂಪಳ್ಳಿ ಗ್ರಾಮಗಳ ಭೂಕಂಪ ಕುರಿತ ವರದಿಗೆ 2006 ರಲ್ಲಿ ಪತ್ರಿಕಾ ಅಕಾಡೆಮಿಯಿಂದ ಅಭಿಮಾನಿ ರಾಜ್ಯ ಪುರಸ್ಕಾರ ಲಭಿಸಿದೆ. ಕಲಬುರಗಿಯ ಅಪ್ಪನ ಕೆರೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ದಿನ 3 ಮಕ್ಕಳ ದುರಂತದ ಸಾವಿನ ಘಟನೆ ಸಂಬಂಧಿ ವರದಿಗೂ 2007 ರಲ್ಲಿ ರಾಜ್ಯ ಪುರಸ್ಕಾರ ದೊರೆತಿದೆ. ಕಲಬುರಗಿ, ಬಸವ ಕಲ್ಯಾಣ, ಸೇಡಂ ಪತ್ರಕರ್ತರ ಸಂಘಗಳಿಂದ ನೀಡುವ ಹಲವು ಪುರಸ್ಕಾರಗಳು ದೊರಕಿವೆ. ಕಲಬುರಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಭಿವೃದ್ಧಿ ಪತ್ರಿಕೋದ್ಯಮದಲ್ಲಿನ ಇವರ ಸೇವೆ ಪರಿಗಣಿಸಿ ಕರ್ನಾಟಕ ಸರ್ಕಾರ ಅಭಿವೃದ್ಧಿ ಪತ್ರಿಕೋದ್ಯಮ ರಾಜ್ಯ ಪುರಸ್ಕಾರ- 2016 ನೀಡಿ ಗೌರವಿಸಿದೆ. ಗುಲ್ಬರ್ಗ ವಿವಿ ನೀಡುವ ಪುಸ್ತಕ ಬಹುಮಾನದಲ್ಲಿ 'ಅಭಿವೃದ್ಧಿ ಅನ್ವೇಷಣೆಯಲ್ಲಿ' ಕೃತಿಗೆ ಕನ್ನಡ ರಾಜ್ಯೋತ್ಸವ ಪುರಸ್ಕಾರ ದೊರೆತಿದೆ.