ಶೇ. ಗೋ. ಕುಲಕರ್ಣಿ ಎಂದು ಪರಿಚಿತರಿರುವ ಧಾರವಾಡ ಗೆಳೆಯರ ಗುಂಪಿನ ಸದಸ್ಯ ಶೇಷಗಿರಿರಾವ ಗೋವಿಂದರಾವ ಕುಲಕರ್ಣಿ ಅವರು ಜನಿಸಿದ್ದು 1908ರಲ್ಲಿ. ಗದಗ ಜಿಲ್ಲೆಯ ಮುಂಡರಗಿಯಲ್ಲಿ ಜನಿಸಿದ ಅವರು ಸವಣೂರಿನಲ್ಲಿ ಹೈಸ್ಕೂಲು ಶಿಕ್ಷಣ ಮತ್ತು ಧಾರವಾಡದ ರಾಷ್ಟ್ರೀಯ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿದರು. 1924ರಿಂದ 1928ರವರೆಗೆ ಶಾಂತಿನಿಕೇತನದಲ್ಲಿ ಉನ್ನತ ವ್ಯಾಸಂಗ ಮಾಡಿದ ಅವರು ವಿಶ್ವಕವಿ ರವೀಂದ್ರನಾಥ ಟಾಗೋರರ ಶಿಷ್ಯರಾಗಿದ್ದರು. 1928ರಲ್ಲಿ ಧಾರವಾಡದ ಗೆಳೆಯರ ಗುಂಪಿನ ಸಕ್ರಿಯ ಸದಸ್ಯರಾದ ಅವರು 'ಜಯ ಕರ್ನಾಟಕ' ಪತ್ರಿಕೆಯ ವ್ಯವಸ್ಥಾಪಕರಾಗಿ, ಪ್ರಚಾರಕರಾಗಿ ನಾಡಿನಾದ್ಯಂತ ಸಂಚರಿಸಿದರು; 1936ರಲ್ಲಿ ಸಾಧನಾ ಮುದ್ರಣಾಯಲಯ ಸ್ಥಾಪಿಸಿದರು; 'ಜೀವನ' ಮಾಸಪತ್ರಿಕೆಯ ಮುದ್ರಕರಾಗಿ, ಪ್ರಕಾಶಕರಾಗಿ ದುಡಿದರು. ಕನ್ನಡ ಪುಸ್ತಕಗಳ ಮಾರಾಟಕ್ಕಾಗಿ ಧಾರವಾಡದಲ್ಲಿ ಕರ್ನಾಟಕ ಸಾಹಿತ್ಯ ಮಂದಿರವನ್ನು ಸ್ಥಾಪಿಸಿದ ಅವರು 1941ರಲ್ಲಿ ಅವರು ಮಂಗಳೂರಿನ ಕೆ.ಟಿ. ಆಳ್ವ ಅವರ ಪುತ್ರಿ ಅಹಲ್ಯಾರನ್ನು ವಿವಾಹವಾದರು. ಅಹಲ್ಯಾ ಅವರೇ ಮುಂದೆ ಹಲವು ಕಾದಂಬರಿಗಳನ್ನು ಬರೆದು ಪ್ರಸಿದ್ಧರಾದ ಗೀತಾ ಕುಲಕರ್ಣಿ. 1965ರಿಂದ 1972ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಬ್ರಾಹ್ಮಣ ಸಾಹಿತ್ಯ ಸಂಶೋಧನಾ ವಿಭಾಗದಲ್ಲಿ ಪ್ರಸಿದ್ಧ ಲೇಖಕ ಬೆಟಗೇರಿ ಕೃಷ್ಣಶರ್ಮರ ಜೊತೆ ಕೆಲಸಮಾಡಿದ ಅವರು 1983ರಲ್ಲಿ ನಿಧನರಾದರು.
ಶೇ.ಗೋ. ಕುಲಕರ್ಣಿಯವರ ಪ್ರಕಟಿತ ಕೃತಿಗಳಲ್ಲಿ ನಾ ಕಂಡ ಗೆಳೆಯರ ಗುಂಪು, ಮಹಾಪೂರ, ಬೆಳುವಲದ ಭಾಗ್ಯಲಕ್ಷ್ಮಿ (ಕಾದಂಬರಿಗಳು), ಎರಡು ಭಾಗಗಳಲ್ಲಿ ಪ್ರಕಟವಾಗಿರುವ ನನ್ನ ಗೀತೆಗಳು (ಕವನ ಸಂಕಲನಗಳು), ಬಂಗಾಲಿಯಿಂದ ಅನುವಾದಿಸಿರುವ ರವೀಂದ್ರರ ಬಾಲ ಸಾಹಿತ್ಯ ಆಚಾರ್ಯ ದೇವರ ಸೊಸೆ, ರವೀಂದ್ರರ ಗೀತಾಂಜಲಿ ಮುಖ್ಯವಾದುವು. ಅವರು ಸಂಪಾದಿಸಿದ ಗ್ರಂಥ ಕವಿ ಅಂಬಿಕಾತನಯದತ್ತ (1946).