ದಕ್ಷಿಣ ಕನ್ನಡದ ಹಳ್ಳಿಯೊಂದರಿಂದ ಬಂದಿರುವ ಶರತ್ ಅನ್ನಕ್ಕೆ ಸಾಫ್ಟವೇರ್ ಎಂಜಿನಿಯರಿಂಗ್ ವೃತ್ತಿಯನ್ನು ನೆಚ್ಚಿಕೊಂಡು, ಬಿಡುವಾದಾಗ ಹವ್ಯಾಸಗಳ ಬೆನ್ನು ಹತ್ತುತ್ತಾರೆ. ವಿಜ್ಞಾನ, ಗಣಿತ ಅಂದರೆ ಪ್ರೀತಿ, ಸಿನೆಮಾ, ಸಾಹಿತ್ಯ ಅಂದರೆ ಜೀವ. ರಂಗಭೂಮಿ, ಯಕ್ಷಗಾನ ಇವೆಲ್ಲವೂ ಇವರ ಆಸಕ್ತಿಯ ಕ್ಷೇತ್ರಗಳೇ. ಸಾಹಿತ್ಯ, ಭಾಷಾಶಾಸ್ತ್ರ, ಸಿನೆಮಾ, ಗಣಿತ, ವಿಜ್ಞಾನ, ಜಾಗತಿಕ ವಿದ್ಯಮಾನಗಳಿಂದ ಹಿಡಿದು ಅರ್ಥಶಾಸ್ತ್ರದವರೆಗೆ ಅಷ್ಟಿಷ್ಟು ಬರೆದಿದ್ದಾರೆ. ಅನುವಾದವೂ ಇವರ ಆಸಕ್ತಿಯ ಕ್ಷೇತ್ರವೇ.
ಅಂಕಿತ ಪ್ರತಿಭೆ ಮಾಲಿಕೆಯಲ್ಲಿ, "ಬಾಗಿಲು ತೆರೆಯೇ ಸೇಸಮ್ಮ" ಎಂಬ ವೈಚಾರಿಕ ಲಲಿತ ಪ್ರಬಂಧಗಳ ಕೃತಿ ಜೋಗಿಯವರ ಸಂಪಾದಕತ್ವದಲ್ಲಿ ಪ್ರಕಟವಾಗಿದೆ. ಪಾದೆಕಲ್ಲು ನರಸಿಂಹ ಭಟ್ಟ ಎಂಬ ಸಂಸ್ಕೃತ ಪಂಡಿತ,ಚಿಂತಕರ ವಿಚಾರಗಳು ಮತ್ತು ವ್ಯಕ್ತಿತ್ವವನ್ನು ಪರಿಚಯಿಸುವ, "ಹುತ್ತಗಟ್ಟಿದ ಚಿತ್ತ" ಎಂಬ ಕೃತಿಯೂ ಪ್ರಕಟವಾಗಿದೆ. ಜೋಗಿಯವರ "ಕಥೆ ಚಿತ್ರಕಥೆ ಸಂಭಾಷಣೆ" ಕೃತಿಯಲ್ಲಿ ಚಿತ್ರಕಥೆಯ ಬಗೆಗಿನ ಒಂದು ಲೇಖನವೂ ಪ್ರಕಟವಾಗಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ತಿಂಗಳಿಗೆ ಎರಡು ಲೇಖನಗಳನ್ನೂ ಬರೆಯುತ್ತಿದ್ದಾರೆ. ಇಂಗ್ಲಿಷ್ ಕಥೆಗಳ ಅನುವಾದ/ಮರುಸೃಷ್ಟಿಗಳ ಸಂಕಲನವೊಂದೂ ಸದ್ಯದಲ್ಲೇ ಬರಲಿದೆ.