ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡರವರ ಪೂರ್ಣ ಹೆಸರು ಶಾಂತಾರಾಮ ನಾರಾಯಣ ನಾಯಕ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನ ಹಿಚಕಡದಲ್ಲಿ ಸ್ವಾತಂತ್ರ್ಯಯೋಧರ ಕುಟುಂಬದಲ್ಲಿ, 1939 ಮಾರ್ಚ್ 23ರಂದು ಜನಿಸಿದರು. ಇವರು ಹಿಂದಿ ರಾಷ್ಟ್ರಭಾಷಾ ವಿಶಾರದಾ ಪದವಿ ಪಡೆದಿದ್ದಾರೆ. ಜೊತೆಗೆ ಎಂ.ಎ ಪದವಿ, ಹಾಗೂ ಬಿ.ಎಡ್ ಕೂಡಾ ಮಾಡಿದ್ದಾರೆ. ಕೆನರಾ ವೆಲ್‌ಫೇರ್ ಟ್ರಸ್ಟಿನ ಮೊದಲ ಹೈಸ್ಕೂಲ್ ಪಿ .ಎಮ್ . ಹೈಸ್ಕೂಲಿನಲಿ ಸಹಶಿಕ್ಷಕರಾಗಿ 1961ರಲ್ಲಿ ಸೇವೆ ಪ್ರಾರಂಭಿಸಿದ ಅವರು ಮುಂದೆ ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಸಹಶಿಕ್ಷಕರಾಗಿ ಮುಖ್ಯಾಧ್ಯಾಪಕರಾಗಿ ದೀರ್ಘಕಾಲ ಸೇವೆ 1997ರಲ್ಲಿ ನಿವೃತ್ತಿಹೊಂದಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ವದ ಸೇವೆ ಸಲ್ಲಿಸಿರುವ ಅವರ ‘ಕಾಡಹೆಣ್ಣು’, ‘ದಾರಿಮಾಡಿಕೊಡಿ’, ‘ಅನುಭವ’, ‘ಆತಂಕ’, ‘ಅನುರಾಗ’, ‘ನಿನಾದ’, ‘ಸಂಭ್ರಮ ಮತ್ತು ಒಡಲಗೀತ ಇವರ ಕವನ ಸಂಗ್ರಹಗಳು ಪ್ರಕಟಗೊಂಡಿವೆ. ಚರಿತ್ರೆಯಲ್ಲಿ ಮರೆತವರ ಕಥೆ ಮತ್ತು ಸ್ವಾತಂತ್ರ್ಯ ಹೋರಾಟದ ಹೊರಳುನೋಟ ಇವರು ಬರೆದ ಚರಿತ್ರೆಗಳು. ಮಾನಧನ ಎಂ.ಎಚ್. ನಾಯಕ, ಶಿಕ್ಷಕ ಕವಿ ವಿ.ವೆ, ತೊರ್ಕೆ, ಕರುಣಾಳು ಸ ,ಪ . ಗಾಂವಕರ, ಕರಬಂಧಿ ಡಿಕ್ಟೇಟರ್ ಬಾಸಗೋಡ ರಾಮ ನಾಯಕ, ಚುಟುಕು ಬ್ರಹ್ಮ ದಿನಕರ ದೇಸಾಯಿ ಮತ್ತು ಗೊನೇಹಳ್ಳಿಯ ಬೆಳಕು ಇವರು ರಚಿಸಿದ ಜೀವನ ಚರಿತ್ರೆಗಳು.ಇವರು ಬರೆದ ಪ್ರಬಂಧಗಳೆಂದರೆ ‘ನಾಡವರು ಒಂದು ಸಾಂಸ್ಕೃತಿಕ ಅಧ್ಯಯನ’, ‘ಹಂಬಲ’, ‘ಹುಡುಕಾಟ ಮತ್ತು ಒಡನಾಟ’ ಜೊತೆಗೆ ‘ಮಂಡಕ್ಕಿ ತಿಂದ ಗಂಗೆ’ ಇವರು ಬರೆದ ಕಥೆಯಾಗಿದೆ.