ಸತ್ಯಾನಂದ ಪಾತ್ರೋಟ ಅವರು ಕನ್ನಡದ ಹೊಸ ಸಂವೇದನೆಯ ಕವಿ, ಲೇಖಕರು. ‘ಪುಟ್ಟ ಗುಡಿಸಲಿನಲ್ಲಿ ಕೆಟ್ಟ ಕನಸುಗಳಿಲ್ಲ..ಮನಸು-ಕನಸುಗಳಲ್ಲಿ ಜಾಜಿ ಮಲ್ಲಿಗೆ..ಎನ್ನುವ ಮೂಲಕ ನಾಡಿನಾದ್ಯಂತ ಜಾಜಿ ಮಲ್ಲಿಗೆ ಕವಿ ಎಂದೇ ಖ್ಯಾತರಾದವರು. ಕೃಷ್ಣಾ ನದಿ ತೀರದ ಸತ್ಯಾನಂದ ಪಾತ್ರೋಟ ದಲಿತ ಲೋಕದ ಬಂಡಾಯ ಪ್ರತಿಭೆ. ಇವರು ಬಾಗಲಕೋಟೆಯಲ್ಲಿ ನಡೆದ ಅಖಿಲ ಭಾರತ ಆರನೇ ದಲಿತ ಸಾಹಿತ್ಯ ಸಮ್ಮೇನಳದ ಅಧ್ಯಕ್ಷತೆ ವಹಿಸಿದ್ದರು.
ಕವಿ ಸತ್ಯಾನಂದ ಪಾತ್ರೋಟ ಅವರ ಲೇಖನಿಯಿಂದ ಸೃಜಿಸಿದ ಕವನಗಳು ನಾಡಿನ ಶಾಲಾ ಕಾಲೇಜಿನಿಂದ ಆರಂಭಗೊಂಡು ವಿಶ್ವವಿದ್ಯಾಲಯದ ಪಠ್ಯಗಳಲ್ಲೂ ಸ್ಥಾನ ಪಡೆದಿವೆ. ಧಾರವಾಡದ ಕರ್ನಾಟಕ ವಿ.ವಿ.ಗುಲ್ಬರ್ಗ, ಮಂಗಳೂರು, ತುಮಕೂರು, ಬೆಳಗಾವಿ ರಾಣಿ ಚೆನ್ನಮ್ಮ ವಿವಿ, ಬೆಂಗಳೂರು, ಮೈಸೂರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ದಾವಣಗೆರೆ ಮತ್ತು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯಗಳು ಇವರ ಕವಿತೆಗಳನ್ನು ಪಠ್ಯದಲ್ಲಿ ಅಳವಡಿಸಿಕೊಂಡಿವೆ. ಈ ಕಾರಣದಿಂದಾಗಿ ಸತ್ಯಾನಂದ ಅವರು ವಿಶ್ವವಿದ್ಯಾಲಯ ಕವಿ ಎಂದೇ ಸ್ನೇಹಿತ ವಲಯದಲ್ಲಿ ಪ್ರಸಿದ್ಧರಾಗಿದ್ದಾರೆ.
ಇಷ್ಟೇ ಅಲ್ಲ, ಮಹಾರಾಷ್ಟ್ರ ಸರ್ಕಾರ ಅಲ್ಲಿನ ದ್ವಿತೀಯ ಪಿಯುಸಿ ಪಠ್ಯದಲ್ಲಿ ಪಾತ್ರೋಟರ ‘ಕಾಗೆ’ ಕವಿತೆಯನ್ನು ಅಳವಡಿಸಿಕೊಂಡಿರುವುದು ವಿಶೇಷ. ಕರಿ ನೆಲದ ಕಲೆಗಳು, ಜಾಜಿ ಮಲ್ಲಿಗೆ, ಕಲ್ಲಿಗೂ ಗೊತ್ತಿರುವ ಕಥೆ, ಕರಿಯ ಕಟ್ಟಿದ ಕವನ, ನನ್ನ ಕನಸಿನ ಹುಡುಗಿ, ನದಿಗೊಂದ ಕನಸು ಮತ್ತು ಅವಳು, ಸತ್ಯಾನಂದ ಅವರ ಈವರೆಗಿನ ಕವನ ಸಂಕಲನಗಳಾಗಿವೆ. ನಮಗ ಯಾರೂ ಇಲ್ಲೋ ಎಲ್ಲಾ ಸಾಕ್ಷಿ, ಮತ್ತೊಬ್ಬ ಏಕಲವ್ಯ, ಹ್ವಾದವರು, ಸತ್ಯನಂದ ಪಾತ್ರೋಟ ವಿರಚಿತ ನಾಟಕಗಳಾಗಿವೆ. ಒಂದಿಷ್ಟು ಕ್ಷಣಗಳು ಅವರ ಪ್ರಬಂಧ ಸಂಕಲನವಾಗಿದೆ. ಅವರ ಪ್ರಸಿದ್ಧ ಕವನಗಳನ್ನು ಒಳಗೊಂಡ ಎದೆಯ ಮಾತು, ಭಾವಗೀತೆಗಳ ಧ್ವನಿ ಸುರಳಿ ನಾಡಿನಾದ್ಯಂತ ಮೆಚ್ಚುಗೆ ಗಳಿಸಿದೆ.
‘ಬರಗೂರು ರಾಮಚಂದ್ರಪ್ಪ- ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂದರ್ಭ’ ಎಂಬ ವಿಷಯದ ಕುರಿತು ಸತ್ಯಾನಂದ ಪಾತ್ರೋಟ ಅವರು ಭೂಮಿ ತತ್ವದ ಸುತ್ತ ಎಂಬ ಪ್ರಬಂಧ ಮಂಡಿಸಿ, ಪಿ.ಎಚ್.ಡಿ ಪದವಿ ಗಳಿಸಿದ್ದಾರೆ. ಸಚಿವ ಎಸ್.ಆರ್.ಪಾಟೀಲ ಅಭಿನಂದನಾ ಗ್ರಂಥ ಸಾರ್ಥಕ ಹಾಗೂ ಡಾ.ಬಿ.ಕೆ.ಹಿರೇಮಠ ಅಭಿನಂದನಾ ಗ್ರಂಥ ನಿಜದ ನೆಲೆಯನ್ನು ಪಾತ್ರೋಟ ಸಂಪಾದಿಸಿರುವ ಪ್ರಮುಖ ಕೃತಿಯಾಗಿವೆ. ಕರ್ನಾಟಕದ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿರುವ ಪಾತ್ರೋಟ ಅವರು ಸದ್ಯ ವಿಜಯಪುರದ ಮಹಿಳಾ ವಿಶ್ವಾವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದಾರೆ. ಅವರ
‘ಬಡವನಾದರೇನು ಪ್ರಿಯೆ
ಕೈ-ತುತ್ತು ತಿನಿಸುವೆ
ಎದೆಯ ತುಂಬ ಒತ್ತಿಕೊಂಡು
ಮುತ್ತು ಮಳೆಯ ಸುರಿಸುವೆ’ ಎಂಬ ಗೀತೆ ಅತ್ಯಂತ ಜನಪ್ರಿಯವಾಗಿದೆ.
ಶ್ರೀಯುತರ ಸಾಹಿತ್ಯ ಕ್ಷೇತ್ರದ ಕೃಷಿಗಾಗಿ 2012ರಲ್ಲಿ ಕರ್ನಾಟಕ ಸರ್ಕಾರವು ಕನ್ನಡ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿದೆ. 2015 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದೆ. ಸತ್ಯಾನಂದ ಪಾತ್ರೋಟರ ಕೃತಿಗಳು- ಒಂದು ಅಧ್ಯಯನ ಎಂಬ ವಿಷಯದ ಕುರಿತು ಗೌರಮ್ಮ ಭೋಗಶೆಟ್ಟಿ ಎಂಬುವವರು ಮಂಡಿಸಿದ ಪ್ರಬಂಧಕ್ಕೆ ಗುಲ್ಬರ್ಗಾ ವಿಶ್ವವಿದ್ಯಾಲಯ ಹಾಗೂ ಸತ್ಯಾನಂದ ಪಾತ್ರೋಟರ ಕಾವ್ಯದಲ್ಲಿ ಪ್ರೀತಿ ಮೀಮಾಂಸೆ ಎಂಬ ವಿಷಯ ಕುರಿತು ವಿ.ಐ.ಬಸನಗೌಡರ ಎಂಬುವವರು ಮಂಡಿಸಿದ ಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಎಂ.ಫಿಲ್ ಪದವಿ ನೀಡಿರುವುದು ವಿಶೇಷ .