ಎಡಪಂಥೀಯ ವಿಚಾರಧಾರೆಯ ಪತ್ರಕರ್ತ ಸನತಕುಮಾರ ಬೆಳಗಲಿ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿಯವರು. ಮೊದಲಿನಿಂದಲೂ ಬಸವರಾಜ ಕಟ್ಟೀಮನಿ, ನಿರಂಜನ, ಜಿ. ರಾಮಕೃಷ್ಣ ಮುಂತಾದ ಸಾಹಿತಿಗಳೊಂದಿಗೆ ಒಡನಾಟವಿದ್ದು, ಜಾತ್ಯತೀತ, ಪ್ರಗತಿ ಪರ ಚಿಂತನೆಗಳತ್ತ ಒಲವು ಬೆಳೆಸಿಕೊಂಡವರು. ಓಕಳಿ ಆಟದ ನೆಪದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ ತಮ್ಮೂರಿನ ಘಟನೆಯನ್ನು ‘ಷಂಡ ಸಮಾಜದಲ್ಲಿ ದುಶ್ಯಾಸನರ ಕೇಕೆ’ ಶೀರ್ಷಿಕೆಯಡಿ ಸಂಯುಕ್ತ ಕರ್ನಾಟಕದ ((19-6-1975) ಮುಖಪುಟದಲ್ಲಿ ಬರೆದ ಲೇಖನವು ಅಂದಿನ ಸರ್ಕಾರದ ಕಣ್ಣು ತೆರೆಸಿ, ಅಪರಾಧಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪ್ರೇರೇಪಿಸಿತ್ತು ಮಾತ್ರವಲ್ಲ;ಸಾವಳಗಿಯಲ್ಲಿ ಓಕುಳಿಯೇ ನಿಷೇಧಿಸಿ ‘ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸರ್ಕಾರ ಸಹಿಸದು. ಹಬ್ಬಗಳು ಸೌಹಾರ್ದಯುತ ಜೀವನಕ್ಕೆ ಪೂರಕವಾಗಿರಬೇಕು’ ಎಂಬ ಸಂದೇಶ ರವಾನಿಸಿತ್ತು.
ಪ್ರಗತಿಪರ ಲೇಖಕರ ಸಂಘ ಸ್ಥಾಪಕರು. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಸನತಕುಮಾರ ಬೆಳಗಲಿ, 1975ರಿಂದ ಸಂಯುಕ್ತ ಕರ್ನಾಟಕದ ಸಂಪಾದಕೀಯ ವಿಭಾಗದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ, ಜನವಾಹಿನಿ (2001) ದಿನಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿ, ಸೂರ್ಯೋದಯ ಪತ್ರಿಕೆಯಲ್ಲಿ (2005) ಬ್ಯೂರೋ ಮುಖ್ಯಸ್ಥರಾಗಿ, ಸಂಯುಕ್ತ ಕರ್ನಾಟಕದ (2006) ದಾವಣಗೆರೆ ಬ್ಯೂರೋ ಮುಖ್ಯಸ್ಥರಾಗಿ, ವಾರ್ತಾಭಾರತಿ (2007) ಬೆಂಗಳೂರು ಆವೃತ್ತಿಯ ಹೊಣೆಗಾರಿಕೆ ವಹಿಸಿದ್ದರು.
ಕೃತಿಗಳು: ಸಂಯುಕ್ತ ಕರ್ನಾಟಕ ಹಾಗೂ ಜನವಾಹಿನಿಯಲ್ಲಿ ‘ವಿಶ್ವ ಪರ್ಯಟನೆ’, ಜನವಾಹಿನಿಯಲ್ಲಿ“ವ್ಯಕ್ತಿ ವಿಶೇಷ’, ವಾರ್ತಾಭಾರತಿಯಲ್ಲಿ ‘ಪ್ರಚಲಿತ’ ಅಂಕಣಗಳನ್ನು ಬರೆದಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್, ಗುಜರಾತ್ ಹತ್ಯಾಕಾಂಡ, ಕೋಮು ದಳ್ಳುರಿ, ಅನ್ನ ಹಳಸಿತ್ತು ನಾಯಿ ಹಸಿದಿತ್ತು, ಬಾಬಾ ಬುಡನಗಿರಿ ವಿವಾದ, ಬ್ರಾಹ್ಮಣವಾದಿ ಭಾರತ,-ದಲಿತ ಭಾರತ-ಇವು ಪ್ರಕಟಿತ ಕೃತಿಗಳು.
ಪ್ರಶಸ್ತಿ-ಗೌರವಗಳು: ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಖಾದ್ರಿ ಶಾಮಣ್ಣ ಪ್ರಶಸ್ತಿ, ಬುದ್ಧ ಪ್ರಶಸ್ತಿ, ಟಿಎಸ್ ಆರ್ ಪತ್ರಿಕೋದ್ಯಮ ಪ್ರಶಸ್ತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ ಗೌರವಗಳು ಸಂದಿವೆ. ಸದ್ಯ, ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.