About the Author

ಸಂಸ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿದ್ದ ಲೇಖಕ ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್ ಮೂಲತಃ ಯಳಂದೂರು ತಾಲ್ಲೂಕಿನ ಅಗರ ಗ್ರಾಮದವರು. ತಂದೆ- ನರಸಿಂಹ ಪಂಡಿತರು, ತಾಯಿ- ಗೌರಮ್ಮ. ಪ್ರಾಥಮಿಕ ಶಿಕ್ಷಣವನ್ನು ಕೊಳ್ಳೆಗಾಲದ ಕುನಗನಹಳ್ಳಿಯಲ್ಲಿ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕೊಳ್ಳೆಗಾಲದ ತಾಲ್ಲೂಕು ಬೋರ್ಡ್ ಮಿಡ್ಲ್ ಸ್ಕೂಲಿನಲ್ಲಿ ಪೂರ್ಣಗೊಳಿಸಿದ ಅವರು ಹೈಸ್ಕೂಲು ಓದಿದ್ದು ಮೈಸೂರಿನ ಮರಿಮಲ್ಲಪ್ಪ ಸ್ಕೂಲಿನಲ್ಲಿ. ಮೆಟ್ರಿಕ್ಯುಲೇಷನ್ ಮುಗಿಸದಿದ್ದರೂ ತಮಿಳು, ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಸಂಸ ಅವರು ತಮ್ಮ 17ನೇ ವಯಸ್ಸಿನಲ್ಲಿ ಕೌಶಲ ಎಂಬ ಕಾದಂಬರಿಯನ್ನು ಪ್ರಕಟಿಸಿದ್ದರು. ಬಹುಮುಖ ಪ್ರತಿಭೆಯಾಗಿದ್ದ ಸಂಸ ಅವರು ತಂದೆಯ ಮರಣದಿಂದಾಗಿ ಸಾಂಸಾರಿಕ ಬಂಧನಗಳಿಂದ ದೂರವಾಗಿದ್ದರು. ಇದೇ ವೇಳೆ ಸಾಹಿತ್ಯದತ್ತ ಹೆಚ್ಚಿನ ಒಲವಿರಿಸಿಕೊಂಡಿದ್ದ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದರು. 1919ರಿಂದ 1935ರವೆರೆಗೆ ಮೈಸೂರು ಶಾರದಾ ವಿಲಾಸ ಶಾಲೆ, ಮಂಗಳೂರಿನ ಪ್ರೆಸ್, ಹೆಬ್ಬಾಲೆಯ ರೂರಲ್ ಎ.ವಿ. ಹೈಸ್ಕೂಲ್, ರೈಲ್ವೆ ಗುಮಾಸ್ತೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಮುಂತಾದೆಡೆ ಹಲವು ಉದ್ಯೋಗಗಳನ್ನು ಮಾಡಿದರು. ಒಂದೆಡೆ ನಿಲ್ಲದ ಸಂಸ ಅವರು ಸುಮಾರು 20 ವರ್ಷಗಳ ಕಾಲ ಉದ್ಯೋಗದಿಂದ ಉದ್ಯೋಗಕ್ಕೆ ದೇಶಾಟನೆ ಮಾಡಿದರು. ಈ ವೇಳೆ ಫಿಜಿ ದ್ವೀಪ, ಟಿಬೆಟ್, ಅಪಘಾನಿಸ್ತಾನ, ಬಲೂಚಿಸ್ತಾನ, ಬರ್ಮಾ ದಕ್ಷಿಣ ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಿಗೆ ಭೇಟಿ ನೀಡಿದರು. ಕೊನೆಗೆ ಮೈಸೂರಿನಲ್ಲಿ ನೆಲೆ ಕಂಡುಕೊಂಡರು. ಅಲ್ಲಿ ಮೈಸೂರಿನ ಅರಸರ ಚರಿತ್ರೆಯನ್ನೊಳಗೊಂಡ ಸುಮಾರು 23 ನಾಟಕಗಳನ್ನು ರಚಿಸಿದರು. ಸುಗುಣ ಗಂಭೀರ, ವಿಗಡ ವಿಕ್ರಮರಾಯಸ ವಿಜಯ ನಾರಸಿಂಹ, ಬಿರುದಂತೆಂಬರ ಗಂಡ. ಬೆಟ್ಟದ ಅರಸು ಮತ್ತು ಮಂತ್ರ ಶಕ್ತಿ ಎಂಬ ಆರು ನಾಟಕಗಳು ಉಳಿದಿವೆ. ಕೌಶಲ ಮತ್ತು ಶೇರ್ಲಾಕ್ ಹೊಂಸ್ ಇನ್ ಜೈಲ್ ಎರಡು ಕಾದಂಬರಿಗಳು.

ಶ್ರೀಮಂತೋದ್ಯಾನ ವರ್ಣನಂ, ಸಂಸಪದಂ, ಈಶಪ್ರಕೋಪನ, ನರಕ ದುರ್ಯೋಧನೀಯಂ, ಅಚ್ಚುಂಬ ಪದ್ಯಕಾವ್ಯಗಳ ರಚನೆ ಮಾಡಿದರು ಇವುಗಳಲ್ಲಿ ಮೊದಲೆರಡು ಕೃತಿಗಳು ಲಭ್ಯವಾಗಿವೆ. ಚಿಕ್ಕ ವಯಸ್ಸಿನಲ್ಲಿಯೇ ತಂದೆಯ ಸಾವಿನಿಂದ ಅನಾಥಭಾವಕ್ಕೆ ಒಳಗಾಗಿದ್ದ ಅವರು ತನ್ನನ್ನು ಕಂಡರೆ ಲೋಕಕ್ಕೆ ಸಹನೆಯಿಲ್ಲ, ಇತರರು ತನ್ನ ಬದುಕನ್ನು ಕೆಡಿಸಲು ಯತ್ನಿಸುತ್ತಿದ್ದಾರೆ. ತನ್ನ ಕೃತಿಗಳನ್ನು ಕೃತಿಚೌರ್ಯ ಮಾಡುತ್ತಿದ್ದಾರೆ, ಚಾರಿತ್ಯ್ರವಧೆ ಮಾಡುತ್ತಿದ್ದಾರೆ. ಪೊಲೀಸರು ಹಿಂಸಿಸಲು ಬೆನ್ನಟ್ಟಿದ್ದಾರೆ ಎಂಬ ಭ್ರಮೆಯಿಂದ ಪರ್ಸಿಕ್ಯೂಷನ್ ಕಾಂಪ್ಲೆಕ್ಸ್‌ಗೆ ಒಳಗಾಗಿ ಮೈಸೂರಿನ ಸದ್ವಿದ್ಯಾ ಪಾಠಶಾಲೆಯ ಸಣ್ಣ ಕೊಠಡಿಯಲ್ಲಿ 14-02-1934ರಂದು ಆತ್ಮಹತ್ಯೆ ಮಾಡಿಕೊಂಡರು.

ಸಂಸ (ಎ.ಎನ್.ಸ್ವಾಮಿ ವೆಂಕಟಾದ್ರಿ ಅಯ್ಯರ್)

(13 Jan 1898)