ಲೇಖಕ ಸಂಪನ್ನ ವಿಜಯರಾವ್ ಮುತಾಲಿಕ ಅವರು ಮೂಲತಃ ದಾವಣಗೆರೆಯವರು. ಇಂಜಿನಿಯರಿಂಗ್ ಓದುತ್ತಿರುವಾಗಲೇ ಸಂಗೀತ, ನಾಟಕ, ಏಕಪಾತ್ರಾಭಿನಯ, ಪ್ರಹಸನ, ಚರ್ಚಾಸ್ಪರ್ಧೆ -ಹೀಗೆ ಹಲವಾರು ರಾಜ್ಯಮಟ್ಟದ ಲಲಿತಕಲೆಗಳ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರೊ. ಚಂದಶೇಖರ ಪಾಟೀಲರು ಬರೆದ ‘ಕುಂಟಾ ಕುಂಟಾ ಕುರುವತ್ತಿ’ ನಾಟಕದ ನಿರ್ದೇಶನ ಮಾಡಿದ್ದು, ‘ನಾವ್ ಇರೋದ್ ಹೀಗೆ ಸ್ವಾಮಿ’ ಹಾಗೂ ‘ಇದೂ ಒಂದು ಸಮಸ್ಯೆಯೇ’ ಎಂಬ ನಾಟಕಗಳನ್ನೂ ರಚಿಸಿ, ನಿರ್ದೇಶಿಸಿದ್ದಾರೆ. ‘ಅಭಿಯಂತರಂಗ’ ಎಂಬ ಹವ್ಯಾಸಿ ನಾಟಕಾಸಕ್ತರ ಸಂಸ್ಥೆಯಲ್ಲಿ ಮುಖ್ಯಪಾತ್ರ ವಹಿಸಿ ‘ತದ್ರೂಪಿ’, ‘ಅಂತಿಗೊನೆ’, ‘ಈ ಮುಖದವರು’ ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು ‘ಭರದ್ವಾಜ’ ಅವರ ಚೊಚ್ಚಲ ಕಾದಂಬರಿ. ಅವರ ‘ಅವಕಾಶ’ ‘ಮೂರೂವರೆ ಪತ್ರಗಳು’ ಕಥೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಸ್ಯ ಕವನಗಳು ಮತ್ತು ಇತರೆ ಲೇಖನಗಳು ಕನ್ನಡದ ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿದ್ದು ಅಮೆರಿಕಾದಲ್ಲಿ ನಡೆದ ನಾಲ್ಕನೆಯ ‘ಅಕ್ಕ’ ವಿಶ್ವಕನ್ನಡ ಸಮ್ಮೇಳನ-2006 ರ ಉದಯೋನ್ಮುಖ ಬರಹಗಾರರ ಕಾದಂಬರಿ ಸ್ಪರ್ಧೆಯಲ್ಲಿ ‘ಭರದ್ವಾಜ’ ಅತ್ಯುತ್ತಮ ಕಾದಂಬರಿ ಎಂದು ಪ್ರಶಸ್ತಿ ಗಳಿಸಿದೆ. ’ತಥಾಗತ’ ಅವರ ಮತ್ತೊಂದು ಕಾದಂಬರಿ.