ಸರ್ಫ್ರಾಜ್ ಕನ್ನಡ ಎಂ.ಎ ಪದವೀಧರರು. ಸೊರಬ ಚಿಕ್ಕಮಾಕೊಪ್ಪ ಎಂಬ ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಕೆಲವು ಮುಸ್ಲೀಂ ಕುಟುಂಬಗಳು ಬಹುಸಂಖ್ಯಾತ ಹಿಂದೂ ಕುಟುಂಬಗಳ ಜೊತೆಯಲ್ಲಿ ಸಹಬಾಳ್ವೆ ಮಾಡುತ್ತಿರುವ ಭಾವೈಕ್ಯತೆಯ ಪ್ರತೀಕದಂತಿರುವ ಹಳ್ಳಿಯದು. ಇಂತಹ ವಾತಾವರಣದಲ್ಲಿ ಸರ್ಫ್ರಾಜ್ ತಮ್ಮ ಬಾಲ್ಯ ಜೀವನ ಮತ್ತು ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ನಂತರ ಉನ್ನತ ವ್ಯಾಸಂಗವನ್ನು ಸಾಗರ ಮತ್ತು ಶಿವಮೊಗ್ಗಗಳಲ್ಲಿ (ಕುವೆಂಪು ವಿ.ವಿ. ಬಿ.ಆರ್. ಪ್ರಾಜೆಕ್ಟ್) ಮಾಡಿದರು, ವಿದ್ಯಾರ್ಥಿಯಾಗಿರುವಾಗಲೇ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಗೀತಗಳ ಬಗ್ಗೆ ಅಪಾರ ಪ್ರೇಮವನ್ನು ಬೆಳೆಸಿಕೊಂಡವರು. ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿರುವ ಅವರು, ಕನ್ನಡದ ಪ್ರಸಿದ್ಧ ಕವಿಗಳ ಕವನಗಳನ್ನು ಸುಶ್ರಾವ್ಯವಾಗಿ ಹಾಡಬಲ್ಲರು. ಬಹುಮುಖ ಪ್ರತಿಭೆಯಾಗಿರುವ ಸರ್ಫ್ರಾಜ್ ಪ್ರಸ್ತುತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಅಸ್ಮಾ” ಇವರ ಪ್ರಥಮ ಕಾದಂಬರಿ. ತುಂಬಾ ಜನಪ್ರಿಯವಾಗಿದೆ. 'ಉದಯಾಸ್ತ' ಇವರ ಎರಡನೇ ಕಾದಂಬರಿ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸುತ್ತಿರುವ ಉದಯೋನ್ಮುಖ ಲೇಖಕರಲ್ಲಿ ಸರ್ಫ್ರಾಜ್ ಕೂಡ ಒಬ್ಬರು.