ಎಸ್.ವಿ. ಶ್ರೀನಿವಾಸರಾವ್ ಅವರು ತುಮಕೂರು ಜಿಲ್ಲೆಯ ಗೂಳೂರು ಹೋಬಳಿಯ ಚಿಕ್ಕಸಾರಂಗಿ ಗ್ರಾಮದಲ್ಲಿ 1931 ಡಿಸೆಂಬರ್ 24ರಂದು ಜನಿಸಿದರು. ಮನೆತನದಿಂದ ಶ್ಯಾನುಭೋಗರು. ತಂದೆ ಶ್ಯಾನುಭೋಗ್ ವೆಂಕಟರಾಮಯ್ಯ, ತಾಯಿ ಪುಟ್ಟಚ್ಚಮ್ಮ. ಬಿಎಸ್ಸಿ, ಎ.ಎಂ.ಐ.ಇ ಹಾಗೂ ಮೈಸೂರು ವಿ.ವಿ.ಯಿಂದ ಎಂ.ಎ. ಪದವೀಧರರು. ಭಾರತ ಸರ್ಕಾರದ ರಕ್ಷಣಾ ಇಲಾಖೆಯ ಸಿಕ್ಯೂಎಎಲ್ ನಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಓದಿದ್ದು, ವಿಜ್ಞಾನವಾದರೂ ಸಾಹಿತ್ಯದ ಗೀಳು. ಕಾಡ ಬೆಳದಿಂಗಳು, ಮಬ್ಬು ಮುಂಜಾವು, ಸ್ವರಮೇಳ, ಇಬ್ಬನಿ, ರಂಗಸ್ಥಳ ಸೇರಿದಂತೆ 156ಕ್ಕೂ ಹೆಚ್ಚು ಕಥೆ, ಕಾದಂಬರಿಗಳು ಹಾಗೂ ಮಕ್ಕಳ ಸಾಹಿತಿಗಳ ಕುರಿತ ಮಕ್ಕಳೇ ಇವರನ್ನು ನೀವು ಬಲ್ಲಿರಾ ಕೃತಿ ಹಾಗೂ ಆದಿ ಕವಿ ಪಂಪನಿಂದ ಹಿಡಿದು ಇತ್ತೀಚಿನ ಕವಿ, ಸಾಹಿತಿಗಳ ಮಾಹಿತಿ ನೀಡುವ ಕನ್ನಡ ಸಾಹಿತಿ ದರ್ಶನ ಕೃತಿ ಬರೆದಿದ್ದಾರೆ.
ಅವರ ‘ಒರಿಯಾ ಕಥೆಗಳು’ ಉತ್ತಮ ಅನುವಾದಕ್ಕಾಗಿ ರಾಜ್ಯ ಸರಕಾರದ ಬಹುಮಾನ, ‘ಪ್ರೌಢಪ್ರತಾಪ ವೀರ ರಾಜೇಂದ್ರ’ ಕೃತಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ, ‘ಸಹನೆ-ಸಾಧನೆ’ ಮಕ್ಕಳ ಕಥಾಸಂಕಲನಕ್ಕೆ ಆರ್ಯಭಟ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ರನ್ನ ಸಾಹಿತ್ಯ ಪ್ರಶಸ್ತಿ, ವಿಶ್ವೇಶ್ವರಯ್ಯ ಪುರಸ್ಕಾರ, ಕನ್ನಡ ಶ್ರೀ, ಕರ್ನಾಟಕ ಶ್ರೀ ಪ್ರಶಸ್ತಿ, ಸರಸ್ವತಿ ಸುಪುತ್ರ ಪ್ರಶಸ್ತಿ, ವಿಜಯಶ್ರೀ ಪ್ರಶಸ್ತಿ ಮುಂತಾದ ಹಲವಾರು ಗೌರವ ಪ್ರಶಸ್ತಿಗಳು ಅವರಿಗೆ ಸಂದಿವೆ. ಅವರು 2018 ಏಪ್ರಿಲ್ 26ರಂದು ತಮ್ಮ 88ನೇ ವಯಸ್ಸಿನಲ್ಲಿ ಮೃತಪಟ್ಟರು.