ಸಾಹಿತಿ ಸ.ಸ. ಮಾಳವಾಡರು ಹುಟ್ಟಿದ್ದು ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ. ತಂದೆ ಸಂಗನ ಬಸಪ್ಪ, ತಾಯಿ- ಕಾಳಮ್ಮ. ಪ್ರಾರಂಭಿಕ ಶಿಕ್ಷಣವನ್ನು ಗೋವನ ಕೊಪ್ಪ, ಗುಳೇದಗುಡ್ಡ, ಬಾಗಲಕೋಟೆ, ವಿಜಾಪುರಗಳಲ್ಲಿ ಪಡೆದರು. ಧಾರವಾಡದಲ್ಲಿ ಎಂ.ಎ. ಪದವಿ ಪಡೆದರು. ಕೆಲಕಾಲ ಮಾಧ್ಯಮಿಕ ಕಾಲೇಜು ಶಿಕ್ಷಕರಾಗಿದ್ದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ‍್ಯರಾಗಿ, ನಿವೃತ್ತರಾದರು.
ಯು.ಜಿ.ಸಿ. ಪ್ರಾಧ್ಯಾಪಕರಾಗಿ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಕರ್ನಾಟಕ ವಿಶ್ವವಿದ್ಯಾಲಯದ ಪಠ್ಯಪುಸ್ತಕ ನಿರ್ದೇಶನಾಲಯದ ಸಂಸ್ಥಾಪಕ ಗೌರವ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು. ಪರರಾಜ್ಯದ ಪಠ್ಯಪುಸ್ತಕ ರಚನಾ ಸಮಿತಿಗಳಲ್ಲಿ ಸೇವೆ ಸಲ್ಲಿಸಿದರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಆಕಾಶವಾಣಿ ನಿಲಯಗಳ ಸ್ಥಾಪನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ‘ಕರ್ನಾಟಕ ಸಾಹಿತ್ಯ-ಸಂಸ್ಕೃತಿ ದರ್ಶನ’ ಇವರ ಮೊಟ್ಟ ಮೊದಲ ಕೃತಿ. ಸಾಹಿತ್ಯ ಸಮಾಲೋಚನೆ, ಪುಸ್ತಕ ಪ್ರಪಂಚ, ಹರಿಹರನ ರಗಳೆಗಳಲ್ಲಿ ಜೀವನ ದರ್ಶನ, ಕಾವ್ಯ ಮತ್ತು ಜೀವನ ಚಿತ್ರಣ, ಕವೀಂದ್ರ ರವೀಂದ್ರರು, ಸಾಹಿತ್ಯ ಸಂಗಮ, ಷಡಕ್ಷರಿ, ಸಾಹಿತ್ಯ ದೃಷ್ಟಿ, ಹರಿಹರ-ರಾಘವಾಂಕರು ಸೇರಿದಂತೆ ಹಲವು ವಿಮರ್ಶಾ ಕೃತಿಗಳನ್ನು ರಚಿಸಿದರು.
ಕನ್ನಡ ಗದ್ಯಮಾಲೆ ಭಾಗ-1, 2, ರಾಘವಾಂಕ ಚರಿತ್ರೆ, ಶ್ರೀ ಬಸವಣ್ಣನವರ ವಚನ ಸಂಗ್ರಹ, ಕಾವ್ಯ ಪದ ಮಂಜರಿ ಸಂಪಾದಿತ ಕೃತಿಗಳು. ಸಂಸ್ಕೃತಿ, ಕಾಲವಾಹಿನಿ, ದೃಷ್ಟಿಕೋನ, ನಾಲ್ಕು ಭಾಷಣಗಳು, ಸುವಿಚಾರ ಸಂಗಮ ಎಂಬ ವೈಚಾರಿಕ ಬರಹಗಳು. ಪಯಣದ ಕತೆ, ಸಂಚಾರ ಸಂಗಮ ಎಂಬ ಪ್ರವಾಸ ಕಥನಗಳು. ಸ್ವಾದಿ ಅರಸು ಮನೆತನ, ಉತ್ತಂಗಿ ಚನ್ನಪ್ಪ, ಮಧುರ ಚೆನ್ನ, ಬಸವಣ್ಣನವರು, ನಾಗ ಮಹಾಶಯ, ಶಿಶುನಾಳ ಶರೀಫರು ಜೀವನ ಚರಿತ್ರೆ. ಹಳ್ಳಿಯ ಹುಡುಗ, ದಾರಿ ಸಾಗಿದೆ ಎಂಬ ಆತ್ಮಕಥೆ ಸೇರಿದಂತೆ 40ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ವಿದ್ಯಾರ್ಥಿ ದೆಸೆಯಲ್ಲಿಯೇ ಮಂಗ ಮಠ ಎಂಬ ಸಾಹಿತ್ಯ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಸ.ಸ. ಮಾಳವಾಡರಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ. 30-08-1987 ರಂದು ನಿಧನರಾದರು.