ಎಸ್.ಆರ್.ರಾವಳ ಅವರು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ 1958, ಜುಲೈ 1 ರಂದು ಜನನ. ನಾಥಪಂಥ ಸಮೂದಾಯದ ನೇಕಾರಿಕೆ ಮತ್ತು ಕೃಷಿ ಪರಿಸರ ಹೊಂದಿದ ಕೌಟುಂಬಿಕ ಹಿನ್ನೆಲೆಯುಳ್ಳವರಾಗಿದ್ದು ಅಥರ್ಗಾದ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ 1 ರಿಂದ 7ನೇ ತರಗತಿ ಮತ್ತು ಆರ್, ಎಮ್. ಬಿರಾದಾರ ಹೈಸ್ಕೂಲಿನಲ್ಲಿ 8 ರಿಂದ 10ನೇ ತರಗತಿವರೆಗೆ ಶಿಕ್ಷಣ ಪೂರೈಸಿದರು. ಬನಹಟ್ಟಿಯ (ಈಗಿನ ಜಿಲ್ಲೆ ಬಾಗಲಕೋಟ) ಎಸ್. ಆರ್. ಎ. ಮಹಾವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ಜೆ.ಎಸ್.ಎಸ್. ಕಾಲೇಜ ಆಫ್ ಕಾಮರ್ಸ್ ಬನಹಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಬಿ.ಕಾಂ. ಪದವಿಯನ್ನು 1980ರಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರು. ಬಡತನ ಮತ್ತು ಅಲೆಮಾರಿ ಬದುಕನ್ನು ನಿರ್ವಹಿಸಲು ಹಲವಾರು ಕೆಲಸ ಮಾಡುತ್ತಲೇ ಸಾಹಿತ್ಯವನ್ನು ಆರಾಧಿಸುತ್ತ ಬಂದ ಸಾಹಿತ್ಯ ಪ್ರೇಮಿ ಇವರು. ‘ಅಂಗ್ಯಾಂವ' ಕವನ ಸಂಕಲನ, 'ಇಂಗು ತಿಂದ ಮಂಗ' 'ಒಡಲ ಕುದಿತದ ಕಾಳು' ಕವನ ಸಂಕಲನ ಮತ್ತು 'ಶಿವ ಸನ್ನಿಧಿ' ಪೌರಾಣಿಕ ನಾಟಕ ಪ್ರಕಟಣೆ 'ಗುಡುಸಾಬನೂ, ಗೂಡಂ ಗಡಿಯೂ...' ಕಥಾ ಸಂಕಲನ ಮತ್ತು 'ಹೊನ್ನಗಿಂಡಿ' ವಿಮರ್ಶಾ ಸಂಕಲನ 'ಮಂದಾರ ಮಾಲೆ' ಗ್ರಂಥಾವಲೋಕನ ಗ್ರಂಥ ಪ್ರಕಟಣೆಯಾಗಿದೆ.