ವಿಜ್ಞಾನ ಲೇಖಕ ಎಸ್. ಮಂಜುನಾಥ ಅವರು ‘ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ’ಯನ್ನು ಸ್ಥಾಪಿಸಿ, ಕಳೆದೊಂದು ದಶಕದಿಂದ ವಿದ್ಯಾರ್ಥಿ ಹಾಗೂ ಯುವ ಜನತೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನ ಕೇಂದ್ರದ ಅಂತರರಾಷ್ಟ್ರೀಯ ವಸ್ತು ವಿಜ್ಞಾನ ಕೇಂದ್ರದಿಂದ ವಸ್ತು ವಿಜ್ಞಾನದಲ್ಲಿ ಪಿ.ಜಿ. ಡಿಪ್ಲೋಮಾವನ್ನೂ ಪಡೆದಿದ್ದಾರೆ.
ವಿಶ್ವವಿಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಜೊತೆ ಸಂಶೋಧನೆಗಳನ್ನು ನಡೆಸಿ, ಲೇಖನಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಇವರದು. ‘ಚುಕ್ಕಿ ಚಂದ್ರಮ, ಚಿವ್ ಚಿವ್ ಗುಬ್ಬಿ, ವೈಚಾರಿಕ ಕವನಗಳು’ - ಹೀಗೆ ಮಕ್ಕಳಲ್ಲಿ ಕುತೂಹಲ ಕೆರಳಿಸುವ ವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಕೃತಿಗಳನ್ನು ರಚಿಸಿದ್ದಾರೆ.