About the Author

ಪ್ರಾಧ್ಯಾಪಕರು, ಬರಹಗಾರರಾದ ರವೀಂದ್ರ ಆರ್‌. ಕೊಪ್ಪರ್‌ ಅವರ ಪೂರ್ಣ ಹೆಸರು ರವೀಂದ್ರ ರಾಮಾಚಾರ್ಯ ಕೊಪ್ಪರ್‌. ಇವರು ಜನಿಸಿದ್ದು 1947 ಜೂನ್‌ 15ರಂದು ಲಕ್ಷ್ಮೀಶ್ವರದಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರ ಹಾಗೂ ಇಂಗ್ಲಿಷ್‌ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ತರ್ಕಶಾಸ್ತ್ರ, ಮನಃಶಾಸ್ತ್ರ ಹಾಗೂ ಇಂಗ್ಲಿಷ್‌ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಿರುವ ಇವರು ಪದವಿ ವಿದ್ಯಾರ್ಥಿಗಳಿಗಾಗಿ ತರ್ಕಶಾಸ್ತ್ರ, ಸಮಾಜಶಾಸ್ತ್ರ ಕುರಿತು ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ. ಎಸ್‌ಎಸ್‌ಎಲ್‌ಸಿ, ಪಿ.ಯು.ಸಿ. ವಿದ್ಯಾರ್ಥಿಗಳಿಗಾಗಿ ತರ್ಕಶಾಸ್ತ್ರ (ನಿಗಮನ), ತರ್ಕಶಾಸ್ತ್ರ (ಅನುಗಮನ), ಜಾಗತಿಕ ಇತಿಹಾಸ ದರ್ಶನ ಮುಂತಾದ ಪಠ್ಯಾಧಾರಿತ ಕೃತಿಗಳನ್ನು ರಚಿಸಿದ್ದಾರೆ.

ಪದವಿ ವಿದ್ಯಾರ್ಥಿಗಳಿಗಾಗಿ ಅಮೆರಿಕಾದ ಇತಿಹಾಸ, ದಕ್ಷಿಣ ಭಾರತದ ಇತಿಹಾಸ, ಭಾರತೀಯ ಸಾಮಾಜಿಕ ಸಮಸ್ಯೆಗಳು, ನಗರ ಸಮಾಜಶಾಸ್ತ್ರ, ಸಾಮಾಜಿಕ ಚಿಂತನೆಯ ಇತಿಹಾಸ, ವ್ಯವಹಾರಿಕ ಪತ್ರಲೇಖನ ಮತ್ತು ಕಚೇರಿ ಪತ್ರ ಲೇಖನ, ಭಾರತೀಯ ಸಮಾಜದ ಅಧ್ಯಯನ, ಗ್ರಾಮೀಣ ಸಮಾಜಶಾಸ್ತ್ರ, ಸಾಮಾಜಿಕ ಚಿಂತಕರು, ಸಾಮಾಜಿಕ ವಿಘಟನೆ, ಭಾರತೀಯ ಗ್ರಾಮೀಣ ಹಾಗೂ ನಗರ ಸಮಾಜಶಾಸ್ತ್ರ ಕೃತಿಗಳನ್ನು ರಚಿಸಿದ್ದಾರೆ. ಸೃಜನಶೀಲ ಸಾಹಿತ್ಯ ಬರವಣಿಗೆಯಲ್ಲಿಯೂ ತೊಡಗಿಸಿಕೊಂಡಿದ್ದ ಇವರು ಶ್ರೀ ರಾಮಕರುನಾನಂದರು, ಪಂ.ಡಾ. ಪುಟ್ಟರಾಜ ಕವಿ ಗವಾಯಿಗಳು-ಒಂದು ಪರಿಚಯ, ಭಾರತದಲ್ಲಿ ಕೈಗಾರಿಕಾ ಕಾರ್ಮಿಕರ ಸ್ಥಿತಿಗತಿಗಳು, ಪತ್ರ ಲೇಖನ, ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಪರಿಚಯ, ಗದುಗಿನ ಹುಯಿಲಗೋಳ ನಾರಾಯಣರಾವ್‌, ಪರಿಮಳ, ಏಕಿಷ್ಟು ಅವರಸ, ಕೊಂಕು, ಸಾಕ್ಷಾತ್ಕಾರ, ಸಂಪಾದಿತ: ಫಲಪುಷ್ಪ, ಫಲಶ್ರುತಿ, ವಿಶ್ರಾಂತ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. 

ಗದುಗಿನ ಗೆಳೆಯರ ಬಳಗ ಹಾಗೂ ಗದಗ ಜಿಲ್ಲಾ ಹವ್ಯಾಸಿ ಬರಹಗಾರರ ವೇದಿಕೆಯನ್ನು ಆರಂಭಿಸಿ ಯುವ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಿದ್ದರು. ‘ರಜನಿ ರಂಗನಿರಂತರ’ ಸಂಘಟನೆಯ ಮೂಲಕ ರಾಜ್ಯದ ವಿವಿದೆಡೆ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಇವರು ರಚಿಸಿದ ಮಕ್ಕಳ ನಾಟಕ ಹಾಗೂ ಕಿರುಬೋಧಕ ನಾಟಕ ಧಾರವಾಡದ ಆಕಾಶವಾಣಿಯಲ್ಲಿ ಪ್ರಸಾರವಾಗಿದೆ. 

 

ರವೀಂದ್ರ ಆರ್‌. ಕೊಪ್ಪರ್‌

(15 Jun 1947)