ರಂ. ನಾರಾಯಣ ಅಯ್ಯಂಗಾರ್ (ಜ. 1943) ಮೈಸೂರಿನ ಹೆಸರಾಂತ ಸಂಸ್ಕೃತ ಪಂಡಿತ ಕೀರ್ತಿಶೇಷ ವಿದ್ಯಾರತ್ನ ಪ್ರೊ.ಎಸ್. ರಂಗಾಚಾರ್ ಅವರ ಪುತ್ರರು. ತಾಯಿ ಪದ್ಮಾಸಿನಿ. ಬಾಲ್ಯದಿಂದಲೇ ಭಾರತ ದೇಶದ ಪುರಾತನ ಇತಿಹಾಸ, ಸಾಹಿತ್ಯ, ಕಲೆ ಮತ್ತು ಆಧ್ಯಾತ್ಮಿಕ ಸಂಸ್ಕೃತಿಯಲ್ಲಿ ಆಸಕ್ತಿ, ಸಂಸ್ಕೃತದ ವಾತಾವರಣದಲ್ಲಿ ಬೆಳೆದರೂ ಜೊತೆಗೆ ಆಧುನಿಕ ವಿದ್ಯಾಭ್ಯಾಸ, ಇಂಜಿನಿಯರಿಂಗ್ ಪದವೀಧರ. ಬೆಂಗಳೂರಿನ ಪ್ರಸಿದ್ದ ಟಾಟಾ ಇನ್ಸ್ಟಿಟ್ಯೂಟಿನಲ್ಲಿ ಡಾಕ್ಟರೇಟ್, ನಂತರ ಅಮೆರಿಕದ ಹಲವು ವಿಶ್ವವಿದ್ಯಾಲಯಗಳಲ್ಲಿ ಉಚ್ಚ ಸಂಶೋಧನೆ. ಸ್ವದೇಶಕ್ಕೆ ಹಿಂದಿರುಗಿ ಟಾಟಾ ಇನ್ಸ್ಟಿಟ್ಯೂಟಿನ (IISc) ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ 1969ರಿಂದ 2005ರಲ್ಲಿ ಕೆ.ಎಸ್.ಐ.ಡಿ.ಸಿ ವಿಶೇಷ ಪ್ರೊಫೆಸರ್ ಪದವಿಯಿಂದ ನಿವೃತ್ತಿ ಆಗುವವರೆಗೆ ಅಧ್ಯಾಪಕ ವೃತ್ತಿ.
ಭೂಕಂಪ ವಿಜ್ಞಾನ, ಇಂಜಿನಿಯರಿಂಗ್ ಗಣಿತ, ನಾನ್ಲೀನಿಯರ್ ಡೈನಾಮಿಕ್ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಸಂಶೋಧನೆ; ಅದಕ್ಕೆ ತಕ್ಕ ಮನ್ನಣೆ, ಕೇಂದ ಬಾ ಅನುಸಂಧಾನ ಸಂಸ್ಥೆಯ (CBRI- CSIR) ನಿರ್ದೇಶಕ ಸ್ಥಾನಕ್ಕೆ (1994-2000) ಕೇಂದ್ರ ಸರ್ಕಾರದಿಂದ ನೇಮಕ. ಸುಮಾರು 200 ಪ್ರಕಟಿತ ಪ್ರೌಢ ಸಂಶೋಧನಾ ಪ್ರಬಂಧಗಳು; ದೇಶ ವಿದೇಶಗಳಲ್ಲಿ ಕಂಡು ಶಾಸ್ತ್ರದಲ್ಲಿ ತಮ್ಮ ಮೌಲಿಕ ಸಂಶೋಧನೆಯನ್ನು ಕುರಿತು ಭಾಷಣ ಮಾಡಲು ಆಹ್ವಾನ.
ಜರ್ಮನಿ ದೇಶದ ಫಾನ್ ಹಂಬೋಲ್ಡ್ ಫೆಲೊಷಿಪ್ (1980, 1992) ಕರ್ನಾಟಕ ಸರ್ಕಾರದ ವಿಶ್ವೇಶ್ವರಯ್ಯ ಪ್ರಶಸ್ತಿ (1995); ಫ್ಲಾರಿಡ ಅಟ್ಲಾಂಟಿಕ್ ಯೂನಿವರ್ಸಿಟಿಯ ಮೈಟ್ ಸಂದರ್ಶಕ ಪ್ರಾಧ್ಯಾಪಕ ಸ್ಥಾನ (1996); ಕೇಂದ್ರ ಸರ್ಕಾರದ ತಾಂತ್ರಿಕ ದಿನ ಪ್ರಶಸ್ತಿ (2001); ರಾಜಾ ರಾಮಣ್ಣ ಫೆಲೊಷಿಪ್ (2005-10); ವಾಸವಿಕ್ ಸಂಸ್ಥೆಯ ತಂತ್ರಜ್ಞಾನ ಸಂಶೋಧನಾ ಪ್ರಶಸ್ತಿ (2013); ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್, ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ ಸಂಸ್ಥೆಗಳ ಆಯ್ಕೆಯಾದ ಫೆಲೊಷಿಪ್, ಹಲವಾರು ಪುರಸ್ಕಾರಗಳು ಬಂದಿವೆ.
ಜೈನ್ ವಿಶ್ವವಿದ್ಯಾಲಯದಲ್ಲಿ 2008 ರಿಂದ ಕೆಲಸ ಮಾಡುತ್ತಿದ್ದು, ನೂತನ ಮಾದರಿಯ ವಿಪತ್ ಉಪಶಮನ ಕೇಂದ್ರ ವನ್ನು ಸ್ಥಾಪಿಸಿ ಅಗ್ನಿ, ಭೂಕಂಪ ಹಾಗೂ ಮಳೆಯ ಏರುಪೇರುಗಳ ಅಧ್ಯಯನದಲ್ಲಿ ಯುವ ಸಂಶೋಧಕರಿಗೆ ಮಾರ್ಗದರ್ಶಿಗಳಾಗಿದ್ದಾರೆ. ಭಾರತೀಯ ಬೌದ್ದಿಕ ಪರಂಪರೆಯ ಅಧ್ಯಯನ ಮುಂದುವರಿಸಿ, ಮಹಾಭಾರತದ ಕಾಲನಿರ್ಣಯ, ಋಗ್ವೇದದಲ್ಲಿ ಗ್ರಹಣ ಪುನರಾವರ್ತನ ಸಂಖ್ಯೆ, ಪುರಾತನ ಭಾರತದಲ್ಲಿ ಧೂಮಕೇತು ನಿರೀಕ್ಷಣೆ, ಶಿಶುಮಾರ ಮಂಡಲದ ಧ್ರುವ ನಕ್ಷತ್ರ, ಅಗಸ್ಯ ನಕ್ಷತ್ರದ ಪ್ರಥಮ ದರ್ಶನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲಕಾರಿ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
ಇವರ ’ಪರಾಶರತಂತ್ರಂ’ ಎಂಬ, ಸಿದ್ದಾಂತ ಜ್ಯೋತಿಷ ಶಾಸ್ತ್ರಕ್ಕಿಂತ ಪ್ರಾಚೀನ, ಜ್ಯೋತಿರ್ವಿಜ್ಞಾನ ಗ್ರಂಥ ಅನುವಾದ, ಟಿಪ್ಪಣಿಗಳೊಡನೆ, ಜೈನ್ ವಿಶ್ವವಿದ್ಯಾಲಯದ ಪ್ರಕಟಣೆಯಾಗಿ 2013 ರಲ್ಲಿ ಹೊರ ಬಂದಿದೆ.