ತ್ರಿಭಾಷಾ ಪಂಡಿತ ರಾಳ್ಳಪಳ್ಳಿ ಅನಂತಕೃಷ್ಣ ಶರ್ಮ ಅವರು ಹುಟ್ಟಿದ್ದು ಅನಂತಪುರ ಜಿಲ್ಲೆಯ ರಾಳ್ಳಪಳ್ಳಿಯಲ್ಲಿ. ಸಂಸ್ಕೃತ, ಕನ್ನಡ, ತೆಲುಗು ಭಾಷಾ ಪಂಡಿತರು. ಸಂಗೀತ ತಜ್ಞರು. ತಂದೆ- ಕೃಷ್ಣಮಾಚಾರ್ಯರು ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆ ಮತ್ತು ಪರಕಾಲ ಮಠದ ಶ್ರೀಕೃಷ್ಣಬ್ರಹ್ಮತಂತ್ರಿ ಯತೀಂದ್ರರಲ್ಲಿ ವ್ಯಾಕರಣ ಮತ್ತು ಅಲಂಕಾರ ಶಾಸ್ತ್ರ ವ್ಯಾಸಂಗ ಮಾಡಿದರು. ಕರಿಗಿರಿರಾಯರು, ಚಿಕ್ಕರಾಮರಾಯರು ಮತ್ತು ಬಿಡಾರಂ ಕೃಷ್ಣಪ್ಪನವರಲ್ಲಿ ಸಂಗೀತಾಭ್ಯಾಸವನ್ನು ಮಾಡಿದರು. 1912ರಲ್ಲಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ತೆಲುಗು ಅಧ್ಯಾಪಕರಾದರು. 1949ರಲ್ಲಿ ನಿವೃತ್ತಿ ಪಡೆದರು.
ತಿರುಪತಿ ಪ್ರಾಚ್ಯ ಸಂಶೋಧನಾಲಯದಲ್ಲಿ ರೀಡರ್ ಹುದ್ದೆಗೆ ಸೇರಿ, ತಾಳ್ಳಪಾಕ ಕವಿಗಳ ಗೇಯ ರಚನೆಗಳ ಸಂಶೋಧನೆಯ ಮೂಲಕ ತಾಳ್ಳಪಾಕ ಪಾಟಲು ಕೃತಿ ಪ್ರಕಟಿಸಿದರು. ಕವಿ ವೇಮನ ಕುರಿತು ಸಂಶೋಧನೆ ನಡೆಸಿದರು. ಆಂಧ್ರವಿಶ್ವಕಲಾ ಪರಿಷತ್ತಿನಲ್ಲಿ ಉಪನ್ಯಾಸಕರಾಗಿದ್ದರು. ಪ್ರಸಿದ್ಧ ವಾಗ್ಗೇಯಕಾರರು ಹಾಗೂ ಗಾನಕಲೆ ಕುರಿತು ಬರೆಹ-ಭಾಷಣಗಳು, ಗಾನಕಲೆ, ಸಾಹಿತ್ಯ ಮತ್ತು ಜೀವನ ಕಲೆ ಎಂಬ ಕನ್ನಡದ ಗ್ರಂಥಗಳನ್ನು ಪ್ರಕಟಿಸಿದ್ದು, ಶಂಕರಾಭರಣ, ಕಾನಡ ರಾಗಗಳ ಸ್ವರಜತಿ ಮತ್ತು 25 ಕೀರ್ತನೆಗಳನ್ನು ರಚಿಸಿದ್ದಾರೆ. ಇವರಿಗೆ ರಾಜ್ಯ ಸಂಗೀತ ನಾಟಕ ಅಕಾಡೆಮಿ ವಿಶೇಷ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಸದಸ್ಯತ್ವ, ತಿರುಪತಿ ವೆಂಕಟೇಶ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿದೆ. ಗಾನಕಲಾ ಪ್ರಪೂರ್ಣ, ಗಾನಕಲಾ ಸಿಂಧು ಗೌರವ ಬಿರುದುಗಳನ್ನು ಪಡೆದಿದ್ದಾರೆ. ಅವರು 10-03-1979ರಂದು ನಿಧನರಾದರು.