ಕರ್ನಾಟಕ ಸಂಗೀತ ಶಾಸ್ತ್ರ ಬೋಧಿನಿ ಕೃತಿಯ ಲೇಖಕಿಯರಾದ ವಿದುಷಿ ಆರ್. ವಸಂತಲಕ್ಷ್ಮಿಯವರು ಸಂಪ್ರದಾಯ ಬದ್ದ ಕುಟುಂಬದಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಹಾಗೂ ತಾಯಿ ಅನ್ನಪೂರ್ಣಮ್ಮ ದಂಪತಿಗಳು ಕಟ್ಟಾ ಸಂಗೀತಾಭಿಮಾನಿಗಳು. ನಿರಂತರ ಪ್ರೋತ್ಸಾಹದ ಬೆಂಬಲದಿಂದ ಪ್ರೇರಿತರಾದ ವಸಂತಲಕ್ಷ್ಮಿ ಅವರು ಸಂಗೀತದಲ್ಲಿ ಅನನ್ಯವಾದುದನ್ನು ಸಾಧಿಸಲು ಸಾಧ್ಯವಾಗಿದೆ. ಸಂಗೀತದಲ್ಲಿ ಸ್ನಾತಕೊತ್ತರ ಪದವಿಯಲ್ಲಿ ಮೊದಲನೇ ರ್‍ಯಾಂಕ್ ಮತ್ತು ಚಿನ್ನದ ಪದಕವನ್ನು ಪಡೆದು ರಾಜ್ಯಮಟ್ಟದ ಗಾಯನ ಮತ್ತು ವೀಣಾವಾದನ ವಿದ್ಯತ್ ಪರೀಕ್ಷೆಗಳಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತು ವರ್ಷಗಳ ದೀರ್ಘ ಬೋಧನೆಯ ಅವಧಿಯಲ್ಲಿ ಸಾವಿರಕ್ಕೂ ಹೆಚ್ಚಿನ ಶಿಷ್ಟರನ್ನು ತರಬೇತಿಗೊಳಿಸಿದ್ದಾರೆ. ನಿತ್ಯವೂ ಆಸಕ್ತರಿಗೆ ಲಲಿತಾ ಸಹಸ್ರನಾಮ ಹಾಗೂ ಸೌಂದರ್ಯ ಲಹರಿಗಳ ತರಗತಿಗಳನ್ನು ನಡೆಸುತ್ತಿದ್ದಾರೆ. ಹರಿದಾಸರು ಎಂಬ ಗ್ರಂಥದಲ್ಲಿ ಅನ್ನಾಮಾಚಾರ್ಯ ಮತ್ತು ಭದ್ರಾಚಲ ರಾಮದಾಸ ಪರಿಚಯ ಲೇಖನಗಳು ಹಾಗೂ ಮೈಸೂರಿನ ಗಾನಭಾರತೀ ಸಂಸ್ಥೆಯ ಮಾಸಪತ್ರಿಕೆ ತಿಲ್ಲಾನದಲ್ಲೂ ಇವರ ಲೇಖನಗಳು ಪ್ರಕಟಗೊಂಡಿವೆ.
ಸಂಗೀತ ಸಾಹಿತ್ಯದಲ್ಲಿ ಇವರ ಅಭಿರುಚಿ, ಪರಿಪಕ್ವತೆ ಹಾಗೂ ಸಾಧನೆಗಳು ಸಹೃದಯರ ಮೆಚ್ಚುಗೆಗೆ ಪಾತ್ರವಾಗಿದೆ.