ಅಂತರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕಲಾವಿದ ಪ್ರಕಾಶ್ ರೈ. ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಪ್ರಕಾಶ್ ಅಷ್ಟೇ ಸಂವೇದನಾ ಶೀಲ ವ್ಯಕ್ತಿಕೂಡಾ ಹೌದು. ನಿರ್ಮಾಪಕ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಪ್ರಕಾಶ್ ಒಬ್ಬ ಒಳ್ಳೆಯ ಓದುಗ. ಜೊತೆಗೆ ಅಂಕಣಕಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕನ್ನಡ ನಾಡಿನ ಪ್ರಕಾಶ್ ರೈ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರತಿಭಾನ್ವಿತ ಕಲಾವಿದರಾಗಿರುವ ಪ್ರಕಾಶ್ ಸಮಾಜಸೇವೆ, ಕೃಷಿ, ಸಂಸ್ಕೃತಿ ಚಿಂತನೆಯಲ್ಲಿಯೂ ಪ್ರಬುದ್ಧರಾಗಿ ತೊಡಗಿಸಿಕೊಂಡಿದ್ದಾರೆ. ಹಲವು ಹಳ್ಳಿಗಳನ್ನು ದತ್ತು ಪಡೆದು ಸಲಹುತ್ತಿರುವ ಅವರು, ಸೇವ್ ಟೈಗರ್ ಅಭಿಯಾನದ ರಾಯಭಾರಿಯಾಗಿಯೂ ಆಗಿದ್ದಾರೆ. ಸಮಾಜಶಾಸ್ತ್ರದ ಬಗ್ಗೆ ಆಸಕ್ತಿ ಇರಿಸಿಕೊಂಡಿರುವ ಪ್ರಕಾಶ್ ಯುವಜನರ ಜೊತೆಗೆ ಸಂವಾದಗಳನ್ನು ನಡೆಸುತ್ತಾ, ಜಸ್ಟ್ ಆಸ್ಕಿಂಗ್ ಎಂಬ ಅಭಿಯಾನವನ್ನು ಆರಂಭಿಸಿ ಅದು ದೇಶಾದ್ಯಂತ ಜನಪ್ರಿಯವೂ ಆಗಿದೆ. ಒಳ್ಳೆಯ ಓದುಗರಾಗಿರುವ ಪ್ರಕಾಶ್ ರೈ ಅಷ್ಟೇ ಒಳ್ಳೆಯ ಬರಹಗಾರ. ಅವರ 'ಇರುವುದೆಲ್ಲವ ಬಿಟ್ಟು' ಮತ್ತು 'ಹೇಳದೇ ಬಿಟ್ಟದ್ದು ಸತ್ಯ' ಎಂಬ ಎರಡು ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಮಾತ್ರವಲ್ಲದೆ ಚಿಂತನಾವಲಯದಲ್ಲೂ ಸಾಕಷ್ಟು ಚರ್ಚೆಗೆ ಒಳಪಟ್ಟಿವೆ.