About the Author

ಡಾ.ಪ್ರದೀಪ ಆರ್.‌ ಎನ್‌ ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ರಾಗಿಮುದ್ದನಹಳ್ಳಿ ಗ್ರಾಮದವರು. ಇವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೋತ್ತರ ಪದವಿಯನ್ನು ಪಡೆದು, ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ರಷ್ಯಾದ ಬರಹಗಾರ ಲಿಯೋ ಟಾಲ್‌ಸ್ಟಾಯ್‌ ಅವರ ಸಾಹಿತ್ಯ ಕುರಿತು ಪ್ರೊ. ವಿಕ್ರಮ್‌ ವಿಸಾಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಸಲ್ಲಿಸಿರುತ್ತಾರೆ. ಪ್ರಸ್ತುತ ಅಜೀಂ ಪ್ರೇಮ್‌ ಜಿ ಫೌಂಡೇಶನ್ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಓದು-ಬರಹ ಇವರ ಹವ್ಯಾಸವಾಗಿದೆ.

ಸಮಾಜಮುಖಿ, ಹೊಸತು, ಅನಿಕೇತನ, ಅಕ್ಷರ ಸಂಗಾತ, ಬಹುವಚನ ಸಾಹಿತ್ಯ ವಿಮರ್ಶೆ, ಅವಧಿ, ಬುಕ್‌ ಬ್ರಹ್ಮ ಪತ್ರಿಕೆಗಳಲ್ಲಿ ಪ್ರದೀಪ್‌ ಅವರ ಲೇಖನಗಳು ಪ್ರಕಟವಾಗಿವೆ. ದಾಸ್ತೋವಾಸ್ಕಿ, ಟಾಲ್‌ಸ್ಟಾಯ್‌, ಚೆಕಾಫ್‌, ನಿಕೊಲಾಯ್‌ ಗೊಗಲ್‌, ಗೋರ್ಕಿ, ಅಚಿಬೆ, ಇಬ್ಸನ್‌, ಕಾಫ್ಕ, ಸಿಮೂನ್‌ ದಿ ಬೊವಾ, ಎರಿಕ್‌ ಫ್ರಾಂ, ಫುಕೋವೊಕಾ, ಮಾರ್ಕ್ವಿಜ್‌, ಟಾಗೂರ್‌, ಅಂಬೇಡ್ಕರ್‌, ಮಹಾಶ್ವೇತಾದೇವಿ, ರಾಜಾರಾವ್‌, ಜಾರ್ಜ್‌ ಆರ್ವೆಲ್‌, ಎಂ.ಎನ್‌.ಶ್ರೀನಿವಾಸ್ ಮುಂತಾದವರ ಆಯ್ದ ಕೃತಿಗಳ(ಅನುವಾದಿತ) ಹಾಗೂ ಟಾಲ್‌ಸ್ಟಾಯ್‌, ಗಾಂಧಿ, ಲೋಹಿಯಾ, ಕುವೆಂಪು, ಅನಂತಮೂರ್ತಿಯವರ ಚಿಂತನೆಗಳ ಕುರಿತು “ನೆನೆವ ಮುನ್ನ” ಎಂಬ ವಿಮರ್ಶಾ ಕೃತಿಯನ್ನು 2023 ರಂದು ಕಲಬುರಗಿಯ ಸಿದ್ದಲಿಂಗೇಶ್ವರ ಪ್ರಕಾಶನದಿಂದ ಪ್ರಕಟಿಸಿರುತ್ತಾರೆ.

ಟಾಲ್‌ಸ್ಟಾಯ್‌ ಕುರಿತ ಇವರ ಸಂಶೋಧನಾ ಪ್ರಬಂಧವು “ಲಿಯೋ ಟಾಲ್‌ಸ್ಟಾಯ್‌ ಸಾಹಿತ್ಯದ ನೆಲೆಗಳು”( ಕನ್ನಡ ಅನುವಾದಗಳನ್ನು ಅನುಲಕ್ಷಿಸಿ) ಎಂಬ ಹೆಸರಿನಲ್ಲಿ ಬಂಡಾರ ಪ್ರಕಾಶನದಿಂದ ಕೃತಿಯಾಗಿ ಪ್ರಕಟಗೊಂಡಿದೆ(2024). ಈ ಕೃತಿಯಲ್ಲಿ ಟಾಲ್‌ಸ್ಟಾಯ್‌ ಅವರ ಬರಹಗಳು ಕನ್ನಡಕ್ಕೆ ಅನುವಾದಗೊಂಡ ಬಗೆ, ಅದರಲ್ಲಿ ಅಡಕವಾದ ಕಲೆ-ಸಾಹಿತ್ಯ, ಧರ್ಮ- ವೈಚಾರಿಕತೆ, ಹೆಣ್ಣು-ಗಂಡಿನ ಸಂಬಂಧ ಹೀಗೆ ಮುಂತಾದ ಆಯಾಮಗಳಲ್ಲಿ ಓದುಗರಿಗೆ ಪರಿಚಯಿಸಿದ್ದಾರೆ.

ಪ್ರದೀಪ ಆರ್.ಎನ್