ಖ್ಯಾತ ಪ್ರವಚನಾಕಾರ ಪಾವಗಡ ಪ್ರಕಾಶರಾವ್ ಅವರು ಮೂಲತಃ ತುಮಕೂರು ಜಿಲ್ಲೆಯ ಪಾವಗಡದವರು. ಎಂ.ಎ. ಹಾಗೂ ಕಾನೂನು ಪದವೀಧರರು. ಬೆಂಗಳೂರಿನ ಎಸ್.ಎಸ್.ಎಂ.ಆರ್ ವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಿದ್ದರು.
ದೂರದರ್ಶನ ಚಂದನ ವಾಹಿನಿಯಲ್ಲಿ ಸುಮಾರು 12 ವರ್ಷಗಳವರೆಗೆ ‘ಸತ್ಯದರ್ಶನ’ ಎಂಬ ಕಾರ್ಯಕ್ರಮದಡಿ ಧಾರ್ಮಿಕ ಪ್ರವಚನ ನೀಡುತ್ತಾ ಬಂದಿದ್ದು ಸುಮಾರು 1008ಕ್ಕೂ ಅಧಿಕ ಎಪಿಸೋಡುಗಳನ್ನು ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಮಹಾಭಾರತದ ಭಗವದ್ ದರ್ಶನ, ರಾಮಾಯಣ, ವೇದ, ಉಪನಿಷತ್ ಕುರಿತು ಪ್ರವಚನ ತಮ್ಮದೇ ಆದ ರೀತಿಯಲ್ಲಿ ಸರಳವಾಗಿ ವಿವರಿಸುವ ಕಲೆಗಾರಿಕೆ ಸಿದ್ಧಿಸಿದೆ. 'ಅದ್ವೈತ ಸಿದ್ಧಾಂತ'ದ, ಶಂಕರ ಭಗವತ್ಪಾದರ ಜೀವನಾದರ್ಶಗಳಿಂದ ಪ್ರಭಾವಿತರು. ಭಾಗವತ ಪದ್ಯಾನುವಾದ, ಪತಂಜಲಿ ಮಹರ್ಷಿಗಳ ಯೋಗ ಸೂತ್ರ, ಕುಮಾರ ವ್ಯಾಸ ಭಾರತ, ಜೈಮಿನಿಭಾರತ, ಕನಕದಾಸರು, ಬೇಂದ್ರೆ, ಬಸವಣ್ಣ ಅಲ್ಲಮಪ್ರಭು, ಅಕ್ಕಮಹದೇವಿ ಹೀಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ಆಂಗ್ಲ ಉಪನ್ಯಾಸಕಾರ ಡೆವಿಡ್ ಫ್ರಾಲಿ ಅವರು ಪಾವಗಡ ಪ್ರಕಾಶರಾವ್ ಅವರನ್ನು ಬೌದ್ಧಿಕ ಕ್ಷತ್ರೀಯ ಎಂದು ಕರೆದಿದ್ದಾರೆ. ತಿರುಮಲ ತಿರುಪತಿ ಕ್ಷೇತ್ರದ ಬ್ರಹ್ಮೋತ್ಸವದ ವೇಳೆ ಹಾಗೂ ಶಬರಿಮಲೆ ಮಕರ ಜ್ಯೋತಿ ವೀಕ್ಷಕ ವ್ಯಾಖ್ಯಾನ ನೀಡಿದ್ದಾರೆ. ಸಂಕ್ರಾಂತಿ, ವಿಪ್ರನುಡಿ, ವಿನಯ, ಮೊದಲಾದ ಪತ್ರಿಕೆಗಳ ಸಂಪಾದಕರಾಗಿದ್ದರು. 'ಸೋನಾಟ ಸಾಫ್ಟ್ವೇರ್ ಕಂಪೆನಿಯ ಕನ್ನಡ ನಿಘಂಟು', ನಿರ್ಮಾಣದಲ್ಲಿ ನೆರವು, ದೂರದರ್ಶನದ 'ಶೃಂಗೇರಿ ದರ್ಶನ', 'ಕನಕದಾಸರು', ಮೊದಲಾದ ಸಾಕ್ಷ್ಯ ಚಿತ್ರಗಳ ನಿರ್ಮಾಣ ಹಾಗೂ ನಿರೂಪಣೆಯಲ್ಲಿ ನೆರವು ನೀಡಿದ್ದಾರೆ.
ಕೃತಿಗಳು: ಸತ್ಯಪ್ರಕಾಶ-ಭಾಗ-1, ಸತ್ಯಪ್ರಕಾಶ ಭಾಗ-2, (ದೂರದರ್ಶನ ಚಂದನ ವಾಹಿನಿಯಲ್ಲಿ ನೀಡಿರುವ ಪ್ರವಚನಗಳ ಸಂಗ್ರಹ ಕೃತಿಗಳು) ಶತಮಾನದ ಶತನಮನ -ಗೌರವಾರ್ಪಣೆ, ಭಾವ ಪ್ರಕಾಶ, ರಾಮಾಯಣದ ಅವಲೋಕನ (ಕನ್ನಡ ಪ್ರಭ ದಿನಪತ್ರಿಕೆ'ಯಲ್ಲಿ ಪ್ರಕಟವಾದ ಅಂಕಣಗಳ ಬರಹಗಳು)