ಚನ್ನಬಸಪ್ಪ ಕವಲಿ ಅವರು ಪಂಡಿತ ಕವಲಿ ಎಂದೇ ಖ್ಯಾತರು. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ 1900ರ ಸೆ. 07 ರಂದು ಜನಿಸಿದರು. ತಂದೆ ಎಲ್ಲಪ್ಪ ಕವಲಿ, ತಾಯಿ ಮರಿಯಮ್ಮ. ಬ್ಯಾಡಗಿಯಲ್ಲಿ ಪ್ರಾರಂಭಿಕ ಶಿಕ್ಷಣ ನಂತರ ಮೈಸೂರಿಗೆ ತೆರಳಿ ಕನ್ನಡ-ಸಂಸ್ಕೃತದಲ್ಲಿ ವಿಶೇಷಾಧ್ಯಯನ ನಡೆಸಿದರು. ಕಾಳಿದಾಸ ಸಾಹಿತ್ನಯ ಕುರಿತು ಕೃತಿ ‘ಕಾಳಿದಾಸ: ಕ್ಷ-ಕಿರಣ’ ರಚಿಸಿದರು. ‘ವ್ಯಾಕರಣ ವಿವಿಧ ಸಾಹಿತ್ಯ’ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ, ಸಯ್ಯದ್ ಅಹಮದ್ ಖಾನ್ ಇತ್ಯಾದಿ ವ್ಯಕ್ತಿ ಚಿತ್ರಗಳು ಬರೆದರು. ಪುರಾಣ ಪುರುಷರ ಕಥೆಗಳು, ನೀತಿಕತೆಗಳು ರಚಿಸಿದರು. ಮಹಾಲಕ್ಷ್ಮೀ-ವಿಷ್ಣು ಪರಿಣಯದ ‘ಶ್ರೀಮತಿ ಪರಿಣಯ’, ‘ಮೆಂಟಲ್ ಹಾಸ್ಪಿಟಲ್-ನಾಟಕ, ಹುಟ್ಟುಹಬ್ಬ, ಸಮಾಜ ಸಾಮರಸ್ಯ ಹೀಗೆ ರೇಡಿಯೋ ನಾಟಕಗಳು, ಏಕಾಂಕ ನಾಟಕಗಳು; ಧಾರವಾಡದ ಆಕಾಶವಾಣಿಗಾಗಿ ಸಿರಿಯಾಳ ಷಷ್ಠಿ, ಹೋಳಿ ಹುಣ್ಣಿಮೆ ಮುಂತಾದ ರೂಪಕಗಳು; ರತ್ನಾವಳಿ,ನಾಗಾನಂದ, ಶ್ರೀಹರ್ಷನ ಪ್ರಿಯದರ್ಶಿಕಾ ಅನುವಾದದ ನಾಟಕಗಳನ್ನೂ ರಚಿಸಿದ್ದಾರೆ.
ಚಲನಚಿತ್ರ ನಿರ್ಮಾಪಕರ ತಂಡದ ಅನೈತಿಕ ವ್ಯವಹಾರವನ್ನೂ ಕುರಿತು ಬರೆದ ನಾಟಕ ‘ಗೋಲ್ಡನ್ ಗ್ಯಾಂಗ್’ ಅಥವಾ ಪುಂಡರ ತಂಡ. ಕನ್ನಡ ನಾಡಿನ ಇತಿಹಾಸಕ್ಕೆ ಸಂಬಂಧಿಸಿದಂತೆ ಬರೆದ ಕೃತಿ ‘ಕನ್ನಡನಾಡಿನ ಚರಿತ್ರೆ’ ಹಾಗೂ ಸಾಂಸ್ಕೃತಿಕ ಜಗತ್ತಿಗೆ ಕೊಟ್ಟ ಕೊಡುಗೆ ‘ಭಾರತೀಯರ ಹಬ್ಬ ಹುಣ್ಣಿಮೆಗಳು’ ಪ್ರಮುಖ ಕೃತಿಗಳು. ‘ಸಚಿತ್ರ ಕನ್ನಡ-ಕನ್ನಡ ಕಸ್ತೂರಿ ಕೋಶ’.-ಇವರ ಉತ್ತಮ ಕೃತಿ ಎಂದೇ ಪರಿಗಣಿತವಾಗಿದೆ. 1957 ರಲ್ಲಿ ಪ್ರಕಟಗೊಂಡ ಈ ಕೋಶವು ಕನ್ನಡದ ಮೊಟ್ಟಮೊದಲ ಸಚಿತ್ರಕೋಶ. ಈ ಕೋಶ ಸುಮಾರು ಒಂದು ಸಾವಿರ ಪುಟಗಳು, 40ಸಾವಿರ ಮುಖ್ಯ ಉಲ್ಲೇಖಗಳು, 2.50 ಲಕ್ಷ ಪದಗಳಿಂದ ಕೂಡಿದೆ. “ಇದೊಂದು ನನ್ನ ಜೀವಿತಾವಧಿಯ ಫಲ. ಸಿರಿಗನ್ನಡದೇವಿಯ ಸಿರಿಮುಡಿಯನ್ನಲ್ಲದಿದ್ದರೂ ಸಿರಿಯಡಿಯನ್ನಾದರೂ ಸಿಂಗರಿಸಬಹುದೆಂಬ ನಂಬಿಕೆ ನನಗಿದೆ” ಎಂದು ಕವಲಿ ಅವರೇ ಹೇಳಿಕೊಂಡಿದ್ದರು. ‘ಪುಟ್ಟಣ್ಣನ ಪಂಚತಂತ್ರ’ ಕೃತಿಗೆ ಕೇಂದ್ರ ಸರಕಾರದ ಬಹುಮಾನ, ‘ವಿವೇಕಾನಂದ’ ಕೃತಿಗೆ ಮುಂಬಯಿ ಸರಕಾರದ ಬಹುಮಾನ ಮತ್ತು ‘ಸಂಸ್ಕೃತ ಸಾಹಿತ್ಯ ಸುಧಾ’ ಕೃತಿಗೆ ಮೈಸೂರು ರಾಜ್ಯ ಸರಕಾರದ ಬಹುಮಾನ ಲಭಿಸಿವೆ. 1985 ಜನೆವರಿ 18 ರಂದು ನಿಧನರಾದರು.