ಪಲ್ಲವಿ ಇಡೂರ್ ಮೂಲತಃ ಕುಂದಾಪುರ ತಾಲೂಕಿನ ಉಪ್ಪುಂದವೆಂಬ ಕಡಲತಡಿಯ ಊರಿನವರು. ಶಿಕ್ಷಕ ದಂಪತಿಯ ಮಗಳಾದ ಪಲ್ಲವಿ ಅವರು ಓದಿದ್ದು ಅಪ್ಪ ಅಮ್ಮ ಕೆಲಸ ಮಾಡುತ್ತಿದ್ದ ಸರಕಾರಿ ಶಾಲೆಯಲ್ಲಿ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಮಂಗಳೂರಿಗೆ ತೆರಳಿದ ಅವರ ಹಾಸ್ಟೆಲ್ ಜೀವನ, ಒಂಟಿತನಕ್ಕೆ ಸಂಗಾತಿಯಾಗಿದ್ದು ಪುಸ್ತಕ ಮತ್ತು ಸಂಗೀತ. ಓದಿದ್ದು ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೋಮಾ ಎಂಜಿನಿಯರಿಂಗ್. ಆನಂತರ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಡಿಪ್ಲೋಮಾ ಪಡೆದು ಕೆಲವರ್ಷ ಪ್ರತಿಷ್ಠಿತ ಐಟಿ ಕಂಪೆನಿಗಳಲ್ಲಿ ಕೆಲಸ. ಪತಿ ಮತ್ತು ಒಬ್ಬ ಮಗನ ಪುಟ್ಟ ಕುಟುಂಬ. ವೈಯಕ್ತಿಕ ಕಾರಣಗಳಿಂದಾಗಿ ಉದ್ಯೋಗ ತೊರೆದು ಸ್ವಂತ ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ಕೆಲಸದ ಜೊತೆಜೊತೆಯಲ್ಲೇ ಸಾಗಿದ ಓದಿನ ಗೀಳು. ಓದಿನೊಂದಿಗೆ ರಾಜ್ಯದ ದೈನಿಕಗಳಿಗೆ, ಮ್ಯಾಗಜೀನ್ ಗಳಿಗೆ ಹಾಗೂ ವಿವಿಧ ಬ್ಲಾಗ್ ಗಳಿಗೆ ಲೇಖನ ಬರೆಯುತ್ತ ಪ್ರಚಲಿತ ವಿದ್ಯಮಾನ ಹಾಗೂ ರಾಜಕೀಯ ವಿಮರ್ಶಕಿಯೆಂದು ಗುರುತಿಸಿಕೊಂಡಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ರಾಜಕೀಯ, ಸಾಮಾಜಿಕ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತ ಚರ್ಚೆಯಲ್ಲಿ ನಿರಂತರವಾಗಿ ಭಾಗವಹಿಸುತ್ತಾ ನಿಷ್ಠುರವಾದ ನಿಲುವಿನಿಂದ ಜನಮನ್ನಣೆಗಳಿಸಿದ್ದಾರೆ. ಸಮಾಜಕ್ಕೆ ತನ್ನದೇ ರೀತಿಯಲ್ಲಿ ನೆರವಾಗುವ ನಿಟ್ಟಿನಲ್ಲಿ ಸಮಾನ ಮನಸ್ಕರ ತಂಡದೊಂದಿಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪಲ್ಲವಿ ಕನ್ನಡ ಸಾಹಿತ್ಯ ಲೋಕಕ್ಕೆ ಜೊಲಾಂಟಾ ಎಂಬ ಅದ್ಭುತ ಸಾಧಕಿಯನ್ನು ಮತ್ತು ಆಕೆಯ ಜೀವನಕಥನವನ್ನು ಪರಿಚಯಿಸಿದ್ದಾರೆ. ಈ ಕೃತಿ ಪ್ರಕಟಗೊಂಡ 5 ತಿಂಗಳೊಳಗೆ 1000 ಕ್ಕೂ ಹೆಚ್ಚು ಪ್ರತಿಗಳು ರಾಜ್ಯದಾದ್ಯಂತ ಮಾರಾಟಗೊಂಡು ಓದುಗರ ಪ್ರಶಂಸೆಗೆ ಪಾತ್ರವಾಗಿದೆ.