ಲೇಖಕ ಪಿ. ಗುರುರಾಜಭಟ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲೂಕಿನ ಪಾದೂರಿನವರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಾದೂರು ಮತ್ತು ಉಡುಪಿಯಲ್ಲಿ ಪೂರ್ಣಗೊಳಿಸಿದ ಅವರು ಪದವೀಧರರು. ಕಾರ್ಕಳದ ಅತ್ತೂರು ಪ್ರಾಥಮಿಕ ಶಾಲೆ ಮತ್ತು ಮೂಡಬಿದರೆಯ ಜೈನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿದರು, 1952ರಲ್ಲಿ ಮದರಾಸು ವಿಶ್ವವಿದ್ಯಾಲಯದಿಂದ ಬಿ.ಎ.ಪದವಿ, 1953ರಲ್ಲಿ ಶೈಕ್ಷಣಿಕ ತರಬೇತಿ ಹಾಗೂ 1956ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎ. (ಇತಿಹಾಸ) ಪದವಿ ಪಡೆದರು. “ತುಳುನಾಡಿನ ರಾಜಕೀಯ ಮತ್ತು ಸಂಸ್ಕೃತಿ ಚರಿತ್ರೆ ಆದಿಕಾಲದಿಂದ ಕ್ರಿ.ಶ.600ರವರೆಗೆ ” ಮಹಾಪ್ರಬಂಧ ಮಂಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದ ಅವರು ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. 1967ರಲ್ಲಿ ಕಲ್ಯಾಣಪುರದಲ್ಲಿ ಮಿಲಾಗ್ರೇಸ್ ಕಾಲೇಜು ಪ್ರಾರಂಭಗೊಂಡಾಗ ಪ್ರಾಂಶುಪಾಲರಾದರು.
ಸಂಶೋಧನೆಗಾಗಿ 1976ರಲ್ಲಿ ಪ್ರಾಂಶುಪಾಲ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದರು. ದ.ಕ. ಜಿಲ್ಲೆಯಲ್ಲೇ ಸುಮಾರು 2000ಕ್ಕೂ ಹೆಚ್ಚು ದೇವಸ್ಥಾನಗಳ ಸಂಶೋಧನೆ. ಶಿಲಾಗೋರಿಗಳ, ತಾಮ್ರಶಾಸನಗಳ ಸಂಶೋಧನೆ. ಅಪೂರ್ವ ಶಾಸನಗಳ ಸಂಶೋಧನೆ ಮಾಡುತ್ತಾ, 700ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದರು. 1963ರಲ್ಲಿ ಪ್ರಕಟವಾದ ಮೊದಲಗ್ರಂಥ “ತುಳುನಾಡು” ಗ್ರಂಥಕ್ಕೆ ದೇವರಾಜ ಬಹದ್ದೂರ್ ಪ್ರಶಸ್ತಿ. ಎರಡನೆಯ ಕೃತಿ “ತುಳುನಾಡಿನ ಸ್ಥಾನಿಕರು” ಉತ್ತಮ ಸಂಶೋಧನಾ ಕೃತಿ ಎಂಬ ಪ್ರಶಂಸೆ. ದ.ಕ. ಜಿಲ್ಲೆಯ ಪ್ರಾಚೀನ ಅವಶೇಷಗಳ ಕ್ರಮಬದ್ಧ ವಿಂಗಡಣೆ ಕುರಿತು ‘ಆನ್ಟಿಕ್ವಿಟೀಸ್ ಆಫ್ ಸೌತ್ ಕೆನರಾ’ (ದಕ್ಷಿಣ ಕನ್ನಡ ಪುರಾತತ್ವ) ಕೃತಿ 1968-69ರಲ್ಲಿ ಪ್ರಕಟವಾಗಿದೆ.500ಕ್ಕೂ ಹೆಚ್ಚು ಪುಟಗಳಲ್ಲಿ 1000ಕ್ಕೂ ಹೆಚ್ಚು ಛಾಯಾ ಚಿತ್ರಗಳ ವಿಶಿಷ್ಟ ಆಧಾರ ಗ್ರಂಥವಾಗಿದೆ.
ಮಣಿಪಾಲ ಶಿಕ್ಷಣ ಅಕಾಡಮಿಯ ಗೌರವ ಸದಸ್ಯತ್ವ, ಕರ್ನಾಟಕ ಸರಕಾರದ ಪುರಾತತ್ವ ಮತ್ತು ವಸ್ತು ಸಂಗ್ರಹಾಲಯ ಇಲಾಖೆಯ ಸಲಹಾ ಸಮಿತಿ ಸದಸ್ಯತ್ವ, ಉಡುಪಿಯ ಗೋವಿಂದ ಪೈ ಸಂಶೋಧನಾ ಕೇಂದ್ರದ ಅಭಿವೃದ್ಧಿ ಮಂಡಲಿಯ ಸದಸ್ಯತ್ವ, ಭಾರತೀಯ ಜ್ಞಾನಪೀಠ ನಿಯೋಜಿತ ಸಂಶೋಧಕರಾಗಿ ದಕ್ಷಿಣ ಭಾರತದ ಜೈನ ಸ್ಮಾರಕಗಳ ಅನ್ವೇಷಣೆ ಮತ್ತು ಸಂಶೋಧನೆಯ ಮುಖ್ಯಸ್ಥರಾಗಿ ಕಾರ‍್ಯ ನಿರ್ವಹಿಸಿದ್ದರು.
ಮೈಸೂರು ವಿಶ್ವವಿದ್ಯಾಲಯ ಸುವರ್ಣ ಮಹೋತ್ಸವ ಪ್ರಶಸ್ತಿ ಲಭಿಸಿದೆ. ಅವರು 1978ರ ಆಗಸ್ಟ್ 27ರಂದು ನಿಧನರಾದರು.