ನುಲೇನೂರು ಶ್ರೀಮೂರ್ತಿ (ಶ್ರೀನಿವಾಸಮೂರ್ತಿ) ಅವರು ಚಿತ್ರದುರ್ಗ ಜಿಲ್ಲೆಯ ನುಲೇನೂರಿನ ದತ್ತಾಶ್ರಮದ (1939-89ವರೆಗೆ) ಸಾಧಕರು. 20ನೇ ಶತಮಾನದ (1906ರಲ್ಲಿ ಜನನ) .ಆರಂಭದಲ್ಲಿದ್ದವರು. ಎರಡೂವರೆ ವರ್ಷ (1926ರಿಂದ ) ಕಾಲವಷ್ಟೇ ಉದ್ಯೋಗದಲ್ಲಿದ್ದು, ನಂತರ ವಿರಕ್ತ ಜೀವನ ಕಳೆದರು.
ಸ್ವಾಮಿ ರಾಮತೀರ್ಥರ ವೇದಾಂತ ಉಪನ್ಯಾಸಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದರು. ‘ಚಿಚ್ಛಕ್ತಿ ಪ್ರಭಾವ’ ಅವರ ಈ ಕೃತಿಯು ತತ್ವಶಾಸ್ತ್ರ, ವೇದಾಂತ ಶಾಸ್ತ್ರ, ಮನೋವಿಜ್ಞಾನ, ಯೋಗಶಾಸ್ತ್ರ, ಮಂತ್ರಶಾಸ್ತ್ರ ಹೀಗೆ ವಿವಿಧ ಆಯಾಮಗಳನ್ನು ಒಳಗೊಂಡಿದೆ. ಭಾರತ ಮಾತೆಯ ಸ್ವಾತಂತ್ಯ್ರ ಸಂರಕ್ಷಣೆ ಎಂಬ ಪ್ರಬಂಧವು ರಾಷ್ಟ್ರ ಚಿಂತನೆಗಳನ್ನು ಒಳಗೊಂಡಿದ್ದು, ಚಿಚ್ಛಕ್ತಿ ಪ್ರಭಾವದಲ್ಲಿ ಸೇರ್ಪಡೆಯಾಗಿದೆ.
1963ರಲ್ಲಿ ಪ್ರಕಟವಾದ ಚಿಚ್ಛಕ್ತಿ ಪ್ರಭಾವ ಕುರಿತು ಕವಿ ಅಂಬಿಕಾತನಯ ದತ್ತರು ‘ಈ ಕೃತಿಯು ಮಾನವೀಯ, ವಿವೇಚನೆಯ ಗ್ರಂಥವಾಗಿದೆ. ಸದ್ಯ ಈ ಗ್ರಂಥವು ಕಾಲೋಚಿತವಾಗಿದೆ. ಮಾನವ ಸೌಹಾರ್ದದಲ್ಲಿ ಬಂದಿರುವ ಅವಘಡಗಳನ್ನು ನಿರಸನವಾಗುವವರೆಗೂ ವಿಚಾರೋದ್ದೀಪಕವಾಗಿ ಪ್ರಚೋದಿಸುವ ಮಹಾ ಉರ್ಮಿಯಾಗಿ, ವಿವಿಧ ವ್ಯಕ್ತಿಗಳಿಗೆ ಎಚ್ಚರ ತರುವ ಸಾಧನೆಯಾಗಿ ಉಳಿದೀತು. ಪ್ರಾಚೀನ ಪರಂಪರೆ, ಆರ್ವಾಚೀನ ಅದ್ಭುತ ಒಂದನ್ನೊಂದು ಎದುರಿಸಿದಾಗ, ಇದುರುಗೊಂಡಾಗ ಉದ್ಭವಿಸುವ ಪರಿಣಾಮ ಕ್ರಮ ಎಂತಹದು ಎಂಬ ಸಮಾಲೋಚನೆಗೆ ತಕ್ಕವರನ್ನಾಗಿ ಹಲವು ವಾಚಕರನ್ನಾದರೂ ಇದು ಮಾಡೀತು; ಶ್ರೀಮೂರ್ತಿಗಳ ಗುರು ಪ್ರೇರಣೆ ಅಂತಹದ್ದು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸ್ವಾಮಿ ರಾಮತೀರ್ಥರ ಜೀವನ ಚರಿತ್ರೆ, ಬನವಾಸಿಯ ಶ್ರೀ ದತ್ತಾತ್ರೇಯ ಯೋಗೀಂದ್ರ ಸದ್ಗುರುಗಳ ಚರಿತಾಮೃತ, ಮೈತ್ರೇಯಿ-ಯಾಜ್ಞವಲ್ಕ್ಯರ ಸಂವಾದದ ಕೃತಿ ಶಾಂಕರ ದರ್ಶನದ ಭಗವತೀ ಚೂಡಾಲಾ ಅಖ್ಯಾನ ವಿವರಣೆ, ದೈವ ಮತ್ತು ಪುರುಷ, ದೇವರು ಯಾರು?, ಹೊಸ ಮನಸ್ಸು ಇತ್ಯಾದಿ ಚಿಂತನಾ ಗ್ರಂಥಳನ್ನು ರಚಿಸಿದ್ದರು.