About the Author

ಪ್ರೀತಿಯ ಪಕ್ಷತೆ ಮತ್ತು ಪರಿಶುದ್ಧತೆಯ ಹೊಸ ಕಾಷ್ಠೆಯನ್ನು ಕಟ್ಟುವ ಪ್ರಯತ್ನದಲ್ಲಿರುವ 'ನಂಕು' ಎಂದೇ ಪ್ರೀತಿಯಿಂದ ಕರೆಯಲ್ಪಡುವ ಯುವಕವಿ ನಂದನ ಕುಪ್ಪಳಿ ಅವರು ಜನಿಸಿದ್ದು 1993 ಜನವರಿ 11 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕು ಕುಪ್ಪಳಿಯಲ್ಲಿ. ತಂದೆ ರಾಮಸ್ವಾಮಿ ಕೆ.ಎಸ್., ತಾಯಿ ಯಶೋಧ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಹಿರೇಕೂಡಿಗೆಯಲ್ಲಿ ಮುಗಿಸಿದ ಇವರು ಪದವಿಪೂರ್ವ ಮತ್ತು ಬಿ.ಎ. ಪದವಿ ಶಿಕ್ಷಣವನ್ನು ತೀರ್ಥಹಳ್ಳಿಯ ಸರ್ಕಾರಿ ಕಾಲೇಜುಗಳಲ್ಲಿ ಪಡೆದರು. ನಂತರ ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಇಡಿ. ಪದವಿಯನ್ನೂ ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನೂ ಪಡೆದಿದ್ದಾರೆ.

ಕುವೆಂಪು ಅವರ ಪ್ರಕೃತಿ ಆರಾಧನೆ, ಕಾರಂತರ ಪ್ರಕೃತಿ ಪರ್ಯಟನೆ, ತೇಜಸ್ವಿಯವರ ಪ್ರಕೃತಿಯ ಅನ್ವೇಷಣೆಗಳಿಂದ ಪ್ರಭಾವಿತರಾದ ಇವರು ತಮ್ಮ ಬದುಕು, ಆಲೋಚನೆ, ಬರವಣಿಗೆ, ನಡೆಯಲ್ಲಿ ಅವುಗಳನ್ನು ಮೈಗೂಡಿಸಿಕೊಂಡಿದ್ದಾರೆ. ಕವಿತೆ, ಕತೆ, ಪ್ರಬಂಧಗಳ ರಚನೆಯಲ್ಲಿ ತೊಡಗಿರುವ ಇವರ ಬರವಣಿಗೆಯ ಪ್ರಧಾನ ಅಂಶ ಪ್ರಕೃತಿ ಪ್ರೇಮವೇ ಆಗಿದೆ.

ಓದು, ಬರಹ, ಫೋಟೋಗ್ರಪಿ, ಚಾರಣ, ಅಧ್ಯಾಪನ, ಕೃಷಿ ಇವು ಅವರ ಆಸಕ್ತಿಯ ಕ್ಷೇತ್ರಗಳು. ಹೊಸನಗರ, ಶಿವಮೊಗ್ಗ, ತೀರ್ಥಹಳ್ಳಿಯ ಶಾಲೆಗಳಲ್ಲಿ ಕೆಲಕಾಲ ಶಿಕ್ಷಕರಾಗಿ, ಮೂಡಿಗೆರೆಯ ತೇಜಸ್ವಿ ಪ್ರತಿಷ್ಠಾನದ ಸಂಯೋಜಕರಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಮತ್ತು ಸಾಹಿತ್ಯಯಾನ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಊರಿನವರಾದ ಇವರು ನಿತ್ಯ ಹಸಿರನ್ನು ಧ್ಯಾನಿಸುತ್ತಾ ಹಸಿರಾಗಿ ಬದುಕುವ ಹಂಬಲ ಹೊಂದಿದ್ದಾರೆ. ಪ್ರಸ್ತುತ ಕುಪ್ಪಳಿಯಲ್ಲಿ ನೆಲೆಸಿದ್ದಾರೆ. 

ನಂಕು (ನಂದನ ಕುಪ್ಪಳ್ಳಿ)

(11 Jan 1993)

Books by Author