ಪ್ರಸಿದ್ಧ ಅನುವಾದಕರಾಗಿರುವ ಡಾ.ಮಲರ್ ವಿಳಿ ಕೆ ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಸ್ತುತ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಮಾಸ್ತಿ ಮತ್ತು ಪುದುಮೈಪಿತ್ತನ್ ಸಣ್ಣ ಕಥೆಗಳ ಒಂದು ಅಧ್ಯಯನ” ಎಂಬ ಇವರ ಸಂಶೋಧನಾ ಪ್ರೌಢ ಪ್ರಬಂಧಕ್ಕೆ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಕಳೆದ ಎರಡು ದಶಕಗಳಿಂದ ಅನುವಾದ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ-ತಮಿಳು ಭಾಷೆಯ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ತಮಿಳು ಸಾಹಿತ್ಯಕ್ಕೆ ಶ್ರೀಮಂತಿಕೆಯನ್ನು ತಂದುಕೊಟ್ಟಿರುವ ಸಂಗಂ ಸಾಹಿತ್ಯವನ್ನು ಕನ್ನಡಕ್ಕೆ ತರುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಇವರ ಅನುವಾದಿತ ಕೃತಿಗಳು :- “ವೈರಮುತ್ತುರವರ 33ಕವಿತೆಗಳು” ಕ್ರೈಸ್ಟ್ ಯೂನಿವರ್ಸಿಟಿ (2009), “ಒಂಭತ್ತನೆಯ ತಿರುಮುರೈ”- ಧರ್ಮಪುರಮ್ ಆಧೀನಂ ಪ್ರಕಟಣೆ (2010) (ಕ್ರಿ.ಶ. 5ರಿಂದ 9ನೇ ಶತಮಾನದವರೆಗೂ ಇದ್ದಂತಹ ಶೈವ ಭಕ್ತರು ರಚಿಸಿದ ಶೈವಪವಿತ್ರ ಗ್ರಂಥ), “ಧ್ಯಾನಲಿಂಗ ಗುರು ತಂದ ಗುರು” ಈಶ ಫೌಂಡೇಶನ್ ಪ್ರಕಟಣೆ (2011), “ಪುದುಮೈಪಿತ್ತನ್” ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ (2014)(ತಮಿಳಿನ ಸಣ್ಣ ಕಥೆಗಳ ಜನಕ ಪುದುಮೈಪಿತ್ತನ್ ಜೀವನ-ಕೃತಿ- ಸಾಧನೆ ಕುರಿತ ಕೃತಿ), ಡಾ. ಸಿದ್ದಲಿಂಗಯ್ಯನವರ “ಕನ್ನಡ ಕವಿಞರ್ ಸಿದ್ಧಲಿಂಗಯ್ಯವಿನ್ ನಾರ್ಪದು ಕನ್ನಡ ಕವಿದೈಗಳ್” 2014 ರಲ್ಲಿ ಪುದುಪ್ಪುಂನಲ್ ಪ್ರಕಟಣೆ ಚೆನ್ನೈ. (ಕನ್ನಡದಿಂದ ತಮಿಳಿಗೆ ಅನುವಾದಿಸಿರುವ ಕೃತಿ ಹಾಗೂ ಅತ್ಯುತ್ತಮ ಅನುವಾದವೆಂದು ತಮಿಳು ವಿದ್ವಾಂಸರಿಂದ ಮೆಚ್ಚುಗೆ ಪಡೆದಿದೆ. “ಅಖಿಲನ್” -ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ತಮಿಳು ಲೇಖಕ ಅವರ ಕುರಿತಾದ ಸ್ವತಂತ್ರ ಕೃತಿ - ಪ್ರಕಟಣೆ (ರಾಷ್ಟ್ರೋತ್ಥಾನ : 2015), ವೈರಮುತ್ತು ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ `ಕಳ್ಳಿಕ್ಕಾಟು ಇದಿಗಾಸಂ’ ಕೃತಿಯನ್ನು ಕನ್ನಡಕ್ಕೆ `ಕಳ್ಳಿಗಾಡಿನ ಇತಿಹಾಸ’ ಹೆಸರಿನಲ್ಲಿ ಅನುವಾದಿಸಿದ್ದಾರೆ (ಪ್ರಕಟಣೆ: ಕೇಂದ್ರ ಸಾಹಿತ್ಯ ಅಕಾಡೆಮಿ : 2021 ). ತಮಿಳು ವಿದ್ವಾಂಸರಾದ ಪ್ರೊ. ತ. ಕೃಷ್ಣಮೂರ್ತಿ ಅವರ ಜೊತೆಗೂಡಿ “ನಟ್ರಿಣೈ”, “ಕುರಿಂಜಿಪ್ಪಾಟ್ಟು”, “ಪದಿಟ್ರುಪ್ಪತ್ತುಂ", “ಪರಿಪಾಡಲ್” ಎಂಬ ತಮಿಳಿನ ನಾಲ್ಕು ಅಭಿಜಾತ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ (ಪ್ರಕಟಣೆ: ಶಾಸ್ತ್ರೀಯ ತಮಿಳು ಕೇಂದ್ರ ಸಂಸ್ಥೆ, ಚೆನ್ನೈ: 2021).ತಮಿಳಿನ ಪ್ರಸಿದ್ಧ ಕವಿ ಪಿಚ್ಚಿನಿಕ್ಕಾಡು ಇಳಂಗೊ ಅವರ ಐವತ್ತಕ್ಕೂ ಹೆಚ್ಚು ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು `ಬಣ್ಣಗಳು ಮಾತಾಡಲಿ’ ಎಂಬ ಶೀರ್ಷಿಕೆಯಲ್ಲಿ ಹೊರಬಂದಿದೆ (ಪ್ರಕಟಣೆ: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್, ಬೆಂಗಳೂರು : 2021). ತಮ್ಮ ಕೃತಿಗಳ ಹೊರತಾಗಿ 2010 ರಲ್ಲಿ ಕೊಯಮತ್ತೂರಿನಲ್ಲಿ ನಡೆದ ಜಾಗತಿಕ ಶಾಸ್ತ್ರೀಯ ತಮಿಳು ಸಮ್ಮೇಳನದಲ್ಲಿ ಅನುವಾದವನ್ನು ಕುರಿತು ತಮಿಳಿನಲ್ಲಿ ಪ್ರಬಂಧವನ್ನು ಮಂಡಿಸಿದ್ದಾರೆ. ಅಂತರರಾಷ್ಟ್ರೀಯ ಪತ್ರಿಕೆಗಳಲ್ಲೂ ಇವರ ಲೇಖನ ಪ್ರಕಟಗೊಂಡಿದೆ. ಕನ್ನಡ, ತಮಿಳಿನ ಸುಮಾರು ನಲವತ್ತಕ್ಕೂ ಹೆಚ್ಚು ಕವಿಗಳ, ಲೇಖಕರ ಕವನ, ಕತೆಗಳನ್ನು ಅನುವಾದಿಸಿದ್ದಾರೆ. ಇವು ತಮಿಳು ಮತ್ತು ಕನ್ನಡದ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ. ದೂರದರ್ಶನ, ಎಫ್‌ಎಂ ರೇಡಿಯೋ, ವೆಬ್ ರೇಡಿಯೋ (ಜರ್ಮನಿ), ಬುಕ್‌ಬ್ರಹ್ಮದಲ್ಲಿ ಇವರ ಸಂದರ್ಶನ ಮಾಡಲಾಗಿದೆ.
ಪ್ರಶಸ್ತಿ, ಪುರಸ್ಕಾರಗಳು :- `ವೈರಮುತ್ತುರವರ ಮೂವತ್ಮೂರು ಕವಿತೆಗಳು’ ಈ ಕೃತಿಗೆ ತಿರುಚಿಯಲ್ಲಿ “ನಲ್ಲಿ ದಿಸೈ ಎಟ್ಟುಂ” - 2011 ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕರ್ನಾಟಕ ದ್ರಾವಿಡ ಮುನ್ನೇಟ್ರ ಕಳಗಂ. ಕರ್ನಾಟಕದ ಡಿಎಂಕೆ ಪಕ್ಷದವರು ಎರಡು ಸಾವಿರ ವರ್ಷಗಳ ಹಿಂದಿನ ಕಾವ್ಯಗಳ ಅನುವಾದದಿಂದ ಇಂದಿನ ಆಧುನಿಕ ಕವಿತೆ ಕಥೆಗಳವರೆಗೂ ಮಾಡಿದಂತಹ ಸಾಹಿತ್ಯ ಸೇವೆಯನ್ನು ಗುರುತಿಸಿ ‘ಕುವೆಂಪು’-2015 ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕೊರಟಿಕೆರೆಯ ಅನ್ನಪೂರ್ಣ ಪ್ರತಿಷ್ಠಾನ-2017 ಇವರ ಸಮಗ್ರ ಅನುವಾದಕ್ಕಾಗಿ ‘ಸಂಪೂರ್ಣ ಪ್ರಶಸ್ತಿ’ ನೀಡಿದೆ.
2018 ಮೇ 6 ರಂದು ‘ತಿರುಪ್ಪೂರು ಶಕ್ತಿ’ ಬಿರುದು ‘ಡಾ. ಸಿದ್ದಲಿಂಗಯ್ಯನವರ ಕನ್ನಡ ಕವಿಞರ್ ಸಿದ್ದಲಿಂಗಯ್ಯವಿನ್ ನಾರ್ಪದು ಕನ್ನಡ ಕವಿದೈಗಳ್’ ಹಾಗೂ ಸಮಗ್ರ ಅನುವಾದಕ್ಕಾಗಿ ನೀಡಿದ್ದಾರೆ. ತಿರುಪ್ಪೂರು. ತಮಿಳುನಾಡು,“ಸಾಹಿತ್ಯ ಸೇವಾ ರತ್ನ” ಪ್ರಶಸ್ತಿ -2018, ಮಂದಗೆರೆ ಕಲೆ- ಸಾಹಿತ್ಯ -ಸಾಂಸ್ಕೃತಿಕ ವೇದಿಕೆ, “ಅಂತರರಾಷ್ಟ್ರೀಯ ಮಹಿಳಾ ಸಾಧಕಿ-2019” ಚೆನ್ನೈ-ನಂದನವನಂ ಫೌಂಡೆಷನ್ಸ್ , ಚೆನ್ನೈನ ಇಲಕ್ಕುವನಾರ್ ಇಲಕ್ಕಿಯ ಪೇರವೈ ನೀಡಿದ “ಇಲಕ್ಕುವನಾರ್-2019” ಪ್ರಶಸ್ತಿ (ತಮಿಳು ಸಂಗಂ ಸಾಹಿತ್ಯದ ಅನುವಾದಕ್ಕಾಗಿ), “ಶ್ರವಣಿಕಾ ಪ್ರಶಸ್ತಿ”- ಬೆಂಗಳೂರಿನ ಕೆ ಎನ್ ಗ್ರೂಪ್ಸ್ ವತಿಯಿಂದಲೂ ಅನೇಕ ಪ್ರಶಸ್ತ್ರಿ ಪುರಸ್ಕಾರಗಳು ಸಂದಿವೆ.