ಕವಿ ಮಹಾದೇವ ಎಸ್. ಪಾಟೀಲ ಅವರು ರಾಯಚೂರು ಜಿಲ್ಲೆಯ ಅಂಗಸೂಗೂರು ತಾಲೂಕಿನ ಭೂಷರು (ರಾಂಪೂರು) ಗ್ರಾಮದಲ್ಲಿ 1982 ಏಪ್ರಿಲ್ 15ರಲ್ಲಿ ಜನಿಸಿದರು. ಓದಿದ್ದು ಬಿ.ಎ. ಪದವಿ. ಸ್ವಗ್ರಾಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ 'ರಾಜಕೀಯದಲ್ಲಿ ರಾವಣರು' ಸಾಮಾಜಿಕ ನಾಟಕವನ್ನು ರಚಿಸಿ, ತಮ್ಮ ಗ್ರಾಮದಲ್ಲಿ ಪ್ರಯೋಗ ಮಾಡುವ ಮೂಲಕ ಸಾಹಿತ್ಯ ಲೋಕವನ್ನು ಪ್ರವೇಶಿಸಿದರು. ಕಾಲೇಜು ಹಂತದಿಂದಲೇ ಕಥೆ,ಕವಿತೆ,ಚುಟುಕುನಾಟಕ ಹೀಗೆ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಅವರ ಮೊದಲ ಕೃತಿ - ಗಾಂಧಿ ಬಜಾರ (ಕವನ ಸಂಕಲನ), ಎರಡನೇ ಕೃತಿ ಭೂಷರಾಧೀಶ್ವರ (ಶರಣರ ಜೀವನ ಚರಿತ್ರೆ), ಮೂರನೇ ಕೃತಿ - ಮುತ್ತಿನ ತೆನೆ (ಚುಟುಕು ಸಂಕಲನ) ಹಾಗೂ ನಾಲ್ಕನೇ ಕೃತಿ ‘ಬಿಸಿಲು ಬಿದ್ದ ರಾತ್ರಿ (ಗಜಲ್ ಸಂಕಲನ). ರಾಯಚೂರು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಕಾನ್ಸ್‌ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.