ಎಂ.ವಿ. ಸುಬ್ಬಯ್ಯನಾಯ್ಡು ಮೈಸೂರು ಜಿಲ್ಲೆಯ ಮಾದಲಾಪುರದಲ್ಲಿ 1896 ರಲ್ಲಿ ಜನಿಸಿದರು. ಸುಬ್ಬಯ್ಯನಾಯ್ಡು ಕನ್ನಡದ ಮೊದಲ ನಾಯಕ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ಸತಿ ಸುಲೋಚನಾ’ ಚಿತ್ರದಲ್ಲಿ (ಪ್ರತಿ)ನಾಯಕ ಇಂದ್ರಜಿತುವಿನ ಪಾತ್ರ ವಹಿಸಿದ ದಿವಂಗತ ಎಂ.ವಿ. ಸುಬ್ಬಯ್ಯ ನಾಯ್ಡುರವರು ಕನ್ನಡ ರಂಗಭೂಮಿ ಮತ್ತು ಚಲನಚಿತ್ರ ರಂಗದ ಅಭಿಜಾತ ಕಲಾವಿದರಲ್ಲೊಬ್ಬರು. ರಂಗಭೂಮಿಯಲ್ಲಿ ಅನೇಕ ಪ್ರಯೋಗ ನಡೆಸಿದವರು.
1932 ರಲ್ಲಿ ತಮ್ಮ ಸ್ವಂತ ಕಂಪನಿ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಳಿ ಸ್ಥಾಪನೆ ಮಾಡಿರು. ಪ್ರಯೋಗಶೀಲ ಆರ್. ನಾಗೇಂದ್ರರಾಯರು ನಾಯ್ಡು ಅವರನ್ನು ಕೂಡಿಕೊಂಡ ನಂತರ ಇಬ್ಬರ ಸಂಗಮದಿಂದ ‘ಭೂಕೈಲಾಸ’, ‘ವಸಂತಸೇನಾ’, ‘ನಿರುಪಮಾ’, ‘ಕೀಚಕವಧೆ’ ಮೊದಲಾದ ನಾಟಕಗಳು ದಕ್ಷಿಣ ಭಾರತದಾದ್ಯಂತ ಜನಮನ್ನಣೆ ಪಡೆದವು.
ಚಿತ್ರರಂಗದ ನಂಟನ್ನು ಬಿಟ್ಟರೂ ರಂಗಭೂಮಿಯಲ್ಲಿ ಸದಾ ಪ್ರಯೋಗಶೀಲರಾಗಿದ್ದ ನಾಯ್ಡುರವರು ಬೆಂಗಳೂರಿನಲ್ಲಿ ಅಪಾರ ಹಣ ಹೂಡಿ ‘ಶ್ರೀರಾಮ ಜನನ’ ನಾಟಕಕ್ಕಾಗಿ ‘ಚಲಿಸುವ ರಂಗ ವೇದಿಕೆ’ಯನ್ನು ನಿರ್ಮಿಸಿದ್ದರು.