ಎಂ.ಎಸ್. ಆರ್. ಮಂಜುನಾಥ ಮೂಲತಃ ಚಿತ್ರದುರ್ಗದವರು, ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿಗಳನ್ನು ಗಳಿಸಿದ ನಂತರ ದೇಶ-ವಿದೇಶಗಳಲ್ಲಿ ನಲವತ್ತೈದು ವರ್ಷಗಳಿಗೂ ಹೆಚ್ಚು ಕಾಲ ಬ್ಯಾಂಕಿಂಗ್, ಹಣಕಾಸು ಮತ್ತು ಸಾಲ ಮೌಲ್ಯಮಾಪನ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ನಿರ್ವಹಿಸಿ ನಿವೃತ್ತರಾಗಿದ್ದಾರೆ. ಆರ್ಥಿಕ ಹಾಗೂ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಂಬಂಧಪಟ್ಟ ಬಿಡಿ ಲೇಖನಗಳು ಇಂಗ್ಲೀಷ್ ಭಾಷೆಯ ಸುಪ್ರಸಿದ್ಧ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅವರ ಮಕ್ಕಳ ಕತೆಗಳು, ವಿಚಾರಾತ್ಮಕ ಲೇಖನಗಳು ಹಾಗೂ ಲಲಿತ ಪ್ರಬಂಧಗಳು ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಬಂದಿವೆ. 'ಸಂಸ್ಕೃತ ನಾಟಕ ಕಥಾಗುಚ್ಛ' ಮಂಜುನಾಥರವರ ವೈಯಕ್ತಿಕ ಆಸಕ್ತಿ ಹಾಗೂ ಹವ್ಯಾಸದಿಂದ ರೂಪುಗೊಂಡ ಕೃತಿಯಾಗಿದೆ. ಇದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ 'ಗ್ರಂಥ ಪುರಸ್ಕಾರ' ಗೌರವಕ್ಕೆ ಪಾತ್ರವಾಗಿದೆ. ಲೇಖಕರ 'ಪುರಾಣ ಪ್ರಸಿದ್ಧರು' – ಮಕ್ಕಳ ಸಾಹಿತ್ಯ ಕೃತಿ ಐಬಿಎಚ್ ಪ್ರಕಾಶನದಿಂದ ಪ್ರಕಟವಾಗಿದೆ.