ಎಂ.ನರಸಿಂಹಮೂರ್ತಿ ಅವರು ಬಾಲ್ಯದಿಂದಲೇ ಸಮಾಜಮುಖಿಯಾಗಿ ಚಿಂತನೆ ನಡೆಸುತ್ತಾ ಬಂದವರು. ಪರಿಸರ, ಪರಂಪರೆಯ ಬಗ್ಗೆ ಹೆಚ್ಚು ಒಲವು ಉಳ್ಳವರಾಗಿ ಅದರ ಜಾಗೃತಿಗಾಗಿ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸಾಕ್ಷ್ಯಾಚಿತ್ರ, ಲೇಖನ, ಪುಸ್ತಕಗಳ ಬರವಣಿಗೆ, ನಾಟಕಗಳ ರಚಿನೆ ಹಾಗೂ ನಿರ್ದೇಶನ, ಹಾಡುಗಳನ್ನು ರಚನೆಯೊಂದಿಗೆ ಸಂಗೀತ ನಿರ್ದೇಶನ, ರೇಖಾಚಿತ್ರ, ವ್ಯಂಗ್ಯಚಿತ್ರಗಳನ್ನು ರಚಿಸುವ ಮೂಲಕ ಕನ್ನಡ, ಹಿಂದಿ ಇಂಗ್ಲಿಷ್ನಲ್ಲಿ ಬರೆದು ಧ್ವನಿ ನೀಡುವುದರ ಮೂಲಕ ಹಲವಾರು ಕಾರ್ಯಕ್ರಮ ನಡೆಸಿದ್ದಾರೆ. ಬೇರೆ ಪ್ರತಿಷ್ಠಿತ ಸಂಸ್ಥೆಗಳು ನಡೆಸಿದ ಕಾರ್ಯಕ್ರಮದಲ್ಲಿ ಪ್ರಮುಖರಾಗಿ ಭಾಗಿಯಾಗಿದ್ದಾರೆ. ರೇಡಿಯೋ, ಟಿವಿಗಳಲ್ಲಿ ನಿರೂಪಕರಾಗಿ, ಸಿನಿಮಾ ಹಾಡುಗಳನ್ನು ಬಳಸಿ ವೇದಿಕೆ ಕಾರ್ಯಕ್ರಮ ನಡೆಸುವುದರ ಮೂಲಕ, ವಿವಿಧ ಸಂಘ ಸಂಸ್ಥೆಗಳಲ್ಲಿ ಉಪನ್ಯಾಸ ನೀಡುವ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸಾಹಿತ್ಯಿಕವಾಗಿ ಇವರು ಹಲವು ಸಂಶೋಧನಾತ್ಮಕ ಕೃತಿಗಳನ್ನು ರಚಿಸಿದ್ದಾರೆ. ಪ್ರಮುಖವಾಗಿ ಕುಸ್ತಿಗೆ ಸಂಬಂಧಿಸಿದಂತೆ `ಮಲ್ಲ ಪ್ರಪಂಚ’, `ಪೈಲ್ವಾನರ ಜಗತ್ತಿನಲ್ಲಿ’, `ಕುಸ್ತಿರಂಗದ ದಿಗ್ಗಜರು’ ಮತ್ತು `ರಾಜರ್ಷಿ ಅಟಲ್ಜಿ’, `ಸ್ವಚ್ಛತಾ ಆಂದೋಲನ’, `ಸೀಸ ಮತ್ತು ನಾವು’, `ಸರ್ದಾರ ಪಟೇಲ್’, `ಸ್ನೇಹ ಸಂಪತ್ತು’ ಕೃತಿಗಳನ್ನು ಹೊರತಂದಿದ್ದಾರೆ. `ಪ್ಲಾಸ್ಟಿಕ್ ಮತ್ತು ಪರಿಸರ’, `ಸೀಸ ಮಾಲಿನ್ಯ’, `ಆರೋಗ್ಯ ಹಾನಿ ಬಣ್ಣಗಳು’, `ತೆಂಗು ನಾರು ಮತ್ತು ಗ್ರಾಮೀಣ ಮಹಿಳೆ’ ಹೀಗೆ ಹಲವಾರು ಸಾಕ್ಷ್ಯಾಚಿತ್ರಗಳನ್ನು ನಿರ್ಮಿಸಿದ್ದಾರೆ.