ಪ್ರಾಚೀನ ಸಾಹಿತ್ಯ ಹಾಗೂ ಆಧುನಿಕ ಸಾಹಿತ್ಯ ಎರಡರಲ್ಲೂ ಪರಿಣತಿ ಪಡೆದಿರುವ ಎಂ. ನಾಗರಾಜ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹೊಸ ಅಮರಾವತಿಯಲ್ಲಿ 1969 ಜುಲೈ 01ರಂದು ಜನಿಸಿದರು. ತಂದೆ ಎಂ. ದೇವಣ್ಣ, ತಾಯಿ ಎಂ. ತಾಯಮ್ಮ. ಗುಲಬರ್ಗಾ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ವ್ಯಾಸಂಗ ಮಾಡಿ ಪ್ರಥಮ ದರ್ಜೆಯಲ್ಲಿ ಸ್ನಾತಕೋತ್ತರ ಪದವಿ, ಡಾ. ಶಾಂತಿನಾಥ ದಿಬ್ಬದ ಅವರ ಮಾರ್ಗದರ್ಶನದಲ್ಲಿ 'ವಚನಕಾರ ಮಡಿವಾಳ ಮಾಚಿದೇವ' ಅಧ್ಯಯನ ಕೈಗೊಂಡು 'ಬಿ. ಎಂ. ಹೊರಕೇರಿ ಚಿನ್ನದ ಪದಕ'ದೊಂದಿಗೆ ಎಂ.ಫಿಲ್. ಪದವಿ. ಡಾ. ಸುಬ್ಬಣ್ಣ ರೈ ಅವರ ಮಾರ್ಗದರ್ಶನದಲ್ಲಿ 'ಕರ್ನಾಟಕ ಮಡಿವಾಳರು' ಒಂದು ಸಾಂಸ್ಕೃತಿಕ ಅಧ್ಯಯನ, ವಿಷಯವನ್ನು ಆಯ್ಕೆ ಮಾಡಿಕೊಂಡು; ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 2007ರಿಂದ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ. ಅಪರಿಮಿತ ಬೆಳಗು (ಆಧುನಿಕ ವಚನಗಳು-2001), ಸುರಿದಂತೆ ಬೆಳಗು (ಗೇಯ ಕವಿತೆಗಳು 2004), ಮಹಾಬೆಳಗು (ಸಂಶೋಧನೆ ಕೃತಿ 2006), ವಚನ ಬೆಳಗು (ವಿಮರ್ಶೆ-2007), ಮಧ್ಯಕಾಲೀನ ಭಕ್ತಿ ಚಳುವಳಿ (ವಿಮರ್ಶೆ-2011), ಕರ್ನಾಟಕ ಮಡಿವಾಳರು: ಸಾಂಸ್ಕೃತಿಕ ಅಧ್ಯಯನ (ಸಂಶೋಧನೆ-2010), ವಕಾಲತ್ತು (ಸಂಪಾದನೆ 2009, ಆಯ್ದ ಲಾವಣಿಗಳ ಸಂಗ್ರಹ (ಸಂ.2011), ನುಡಿತೀರ್ಥ (ವಿಮರ್ಶೆ 2015) ಅವರ ಪ್ರಕಟಿತ ಕೃತಿಗಳು.