ದಕ್ಷಿಣ ಕನ್ನಡದ ಹಳೆಯ ತಲೆಮಾರಿನ ಬರಹಗಾರರಲ್ಲಿ ದಿ|ಕುಡ್ಪಿ ವಾಸುದೇವ ಶೆಣೈ ಅವರ ಕೊಡುಗೆ ಅನನ್ಯ .1907ನೇ ಇಸವಿಯಲ್ಲಿ ಮಂಗಳೂರಿನಲ್ಲಿ ಕುಡ್ಪಿ ನರಸಿಂಹ ಶೆಣೈ ಹಾಗೂ ಕಲ್ಯಾಣಿ ಬಾಯಿಯವರ ಮಗನಾಗಿ ಜನಿಸಿದರು. ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಕೆನರಾ ಹೈಸ್ಕೂಲಿನಲ್ಲಿ ಪಡೆದ ಅವರು, ಸಣ್ಣ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಉನ್ನತ ಶಿಕ್ಷಣದಿಂದ ವಂಚಿತರಾಗಬೇಕಾಯಿತು. ನಂತರ ಉಡುಪಿಯ ಪ್ರಭಾಕರ್ ಪ್ರೆಸ್ ಹಾಗೂ ಮಂಗಳೂರಿನ ಕಂಠೀರವ ಮುದ್ರಣಾಲಯಗಳಲ್ಲಿ ಪತ್ರಿಕಾಗಾರನಾಗಿ ಕೆಲಸ ಪ್ರಾರಂಭಿಸಿ ಕಂಠೀರವ ಮತ್ತು ಸ್ವದೇಶಾಭಿಮಾನಿ ಪತ್ರಿಕೆಗಳಲ್ಲಿ ಸಹಸಂಪಾದಕರಾಗಿದ್ದರು. ಕುಡ್ಪಿಯವರು ತಮ್ಮ ಸ್ವಂತ ವಾರಪತ್ರಿಕೆ ‘ಪ್ರಭಾತ’ವನ್ನು ೧೯೩೫ರಲ್ಲಿ ಪ್ರಾರಂಭಿಸಿದರು. ಕುಡ್ಪಿಯವರು ‘ಪ್ರಭಾತ ಪ್ರಿಂಟರ್ಸ್ ಲಿಮಿಟೆಡ್’ ಎಂಬ ಕಂಪೆನಿ ಪ್ರಾರಂಭಿಸಿ ತಮ್ಮ ಪತ್ರಿಕೆ ‘ಪ್ರಭಾತ’ ಅಲ್ಲದೆ ಹಲವಾರು ಇತರ ಪತ್ರಿಕೆಗಳನ್ನು ಪ್ರಕಾಶಿಸಿದರು. ಹಿರಿಯ ಹಾಗೂ ನವ್ಯ ಸಾಹಿತಿಗಳನ್ನು ಪ್ರೋತ್ಸಾಹಿಸಿದರು. ಒಂದಾಣೆಗೆ 200ಕ್ಕೂ ಹೆಚ್ಚು ಪುಟಗಳ ಶ್ರೀಮದ್ಭಗವದ್ಗೀತೆಯನ್ನು ಒದಗಿಸಿದ ಕೀರ್ತಿ ಕುಡ್ಪಿಯವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯ ರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ ಕುಡ್ಪಿಯವರ ‘ಜಪಾನ್ ಬೆಳಕು, ‘ಮೀರೆ ಮತ್ತು ನಾನು’ ಹಾಗೂ ‘ಕಸದ ಡಬ್ಬಿಗಳು’ ಎಂಬ ಮೂರು ಹಾಸ್ಯ ಕಥಾ ಸಂಕಲನಗಳು ಅಚ್ಚುಮೆಚ್ಚಿನ ಪುಸ್ತಕಗಳಾಗಿ ಇಂದಿಗೂ ಹೆಸರುವಾಸಿಯಾಗಿವೆ.