ಶಿಶು ಸಾಹಿತ್ಯದ ಕಣ್ಮಣಿ ಎಂದೇ ಖ್ಯಾತಿಯ ಕಂಚ್ಯಾಣಿ ಶರಣಪ್ಪನವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಸರೂರ ಗ್ರಾಮದಲ್ಲಿ. ತಂದೆ ಶಿವ ಸಂಗಪ್ಪ, ತಾಯಿ ರುದ್ರಮ್ಮ. ನಾಲ್ಕಾರು ಊರು ಸುತ್ತಾಡಿ ಓದಿದ್ದು ಏಳನೇ ತರಗತಿಯವರೆಗೆ. ಪ್ರಾಥಮಿಕ ಶಾಲಾ ಶಿಕ್ಷಕರಾದ ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. 39 ವರ್ಷ ದೀರ್ಘ ಕಾಲ ಬೋಧಿಸಿ, 1988 ರಲ್ಲಿ ನಿವೃತ್ತರಾದರು..
ಮಕ್ಕಳ ಮನೋಧರ್ಮವನ್ನರಿತು, ಅವರ ಮನೋವಿಕಾಸಕ್ಕೆ ತಕ್ಕಂತಹ ರಮ್ಯವಾದ ಪದಗಳನ್ನು ರಚಿಸಿ, ಹಾಡುತ್ತ, ಕುಣಿಯುತ್ತ, ಕಲಿಯುವಂತಾಗುವಂತಹ ಗೀತೆಗಳನ್ನು ರಚಿಸತೊಡಗಿದರು. ಹಳ್ಳಿಗಾಡಿನ ಮಕ್ಕಳಿಗೆ ಪಠ್ಯ ಪುಸ್ತಕಗಳ ವಿನಃ ಬೇರೆ ರೀತಿಯ ಪುಸ್ತಕಗಳು ದೊರೆಯುತ್ತಿಲ್ಲವೆಂಬ ಅಂಶವನ್ನು ಮನಗಂಡು ತಾವು ಬರೆದ ಪದ್ಯಗಳನ್ನು ಪ್ರಕಟಿಸಲು ತಮ್ಮದೇ ಆದ ‘ಗ್ರಾಮೀಣ ಪ್ರತಿಭಾ ಪ್ರಕಾಶನ’ ದ ಮೂಲಕ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು.
ಕೃತಿಗಳು: ಅಜ್ಜನ ಕಾಡು ( ಮಕ್ಕಳ ಕವಿತೆಗಳು-ಮೊದಲ ಪುಸ್ತಕ), ನಂತರ ಅವರ ಹಲವಾರು ಕವನ ಸಂಕಲನಗಳನ್ನು ರಚಿಸಿದರು.) ಜಾಗೃತ ಭಾರತ, ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಚೆಲುವಿನ ಚಿಟ್ಟೆ, ಪುಟ್ಟಿಯ ತೋಟ, ಬೆದರು ಬೆಚ್ಚ ಮುಂತಾದವುಗಳ ಜೊತೆಗೆ ‘ಗುಡು ಗುಡು ಗುಂಡ’ ಎಂಬ ಶಿಶು ಪ್ರಾಸದ ಪುಸ್ತಕ, ಗಿಲ್ ಗಿಲ್ ಗಿಡ್ಡ, ಅಪ್ಪನ ಕಥೆಗಳು, ಅಪ್ಪನ ಮತ್ತಷ್ಟು ಕಥೆಗಳು, ಚತುರ ಚಿಣ್ಣರು ಮುಂತಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಇವರ ಇತರ ಕೃತಿಗಳೆಂದರೆ ಕನ್ನಡ ಕವಿ ಕೀರ್ತಿ (ಗದ್ಯ ಚರಿತ್ರೆ), ಬಸವ ಪ್ರದೀಪ (ಖಂಡ ಕಾವ್ಯ) ಮತ್ತು ಸಮಗ್ರ ಕವಿತೆಗಳ ಸಂಗ್ರಹ. ಆಯ್ದ ನೂರೊಂದು ಕವಿತೆಗಳು. ಮಕ್ಕಳ ಮನೆ, ಹುಟ್ಟು ಹಬ್ಬ, ತಮ್ಮನ ಶಾಲೆ, ತೋಟದ ಆಟ, ಗುಡು ಗುಡು ಗುಂಡ, ಚಲುವಿನ ಚಿಟ್ಟೆ, ತೊಟ್ಟಿಲು ಗುಬ್ಬಿ, ರಾಜಯೋಗಿ ಬೀಳೂರ ಅಜ್ಜನವರು, ಗಿಲ್ಗಿಲ್ ಗಿಡ್ಡ, ಪುಟ್ಟಿಯ ತೋಟ, ತಿಪ್ಪನ ಕಥೆಗಳು, ತಿಪ್ಪನ ಮತ್ತಷ್ಟು ಕಥೆಗಳು, ಬೆದರು ಬೆಚ್ಚ, ಚತುರ ಚಿಣ್ಣರು, ಹಾಡುವ ಹಕ್ಕಿ, ಬೆಕ್ಕಿನ ಕೊರಳಿಗೆ ಗಂಟೆ, ಅಜ್ಜನ ಅಂದದ ಕಥೆಗಳು ಮುಂತಾದ ಪುಸ್ತಕಗಳನ್ನು ರಚಿಸಿ, ಪ್ರಕಟಿಸಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು: ‘ಜಾಗೃತ ಭಾರತ’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ‘ಅಜ್ಜನ ಹಾಡು’ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ವಸುದೇವ ಭೂಪಾಳಂ ಪ್ರಶಸ್ತಿ, ಧಾರವಾಡದ ಮಕ್ಕಳ ಮನೆ ಮಕ್ಕಳ ಸಾಹಿತ್ಯ ಪ್ರಶಸ್ತಿ , ರಾಷ್ಟ್ರೀಯ ಬಾಲ ಸಾಹಿತ್ಯ ಪುರಸ್ಕಾರ ‘ಗಿಲ್ ಗಿಲ್ ಗಿಡ್ಡ’ ಪುಸ್ತಕಕ್ಕೆ ಅತ್ತಿಮಬ್ಬೆ ಪ್ರತಿಷ್ಠಾನದ ರನ್ನ ಸಾಹಿತ್ಯ ಪ್ರಶಸ್ತಿ ಇತ್ಯಾದಿ, ಹುಬ್ಬಳ್ಳಿಯ ಮೂರುಸಾವಿರ ಮಠ ಸಾಹಿತ್ಯ ಪುರಸ್ಕಾರ, ಭಾಲ್ಕಿ ಸಂಸ್ಥಾನ ಮಠದ ಮಕ್ಕಳ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಮಕ್ಕಳ ಸಾಹಿತ್ಯ ಪ್ರಶಸ್ತಿ, ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದ ಹರ್ಡೇಕರ್ ಮಂಜಪ್ಪ ಮಕ್ಕಳ ಸಾಹಿತ್ಯ ಪ್ರಶಸ್ತಿಗಳ ಜೊತೆಗೆ ಬಾಗಲಕೋಟೆಯಲ್ಲಿ ನಡೆದ ಬಿಜಾಪುರ ಜಿಲ್ಲಾ 5ನೇಯ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಬಿಜಾಪುರ ತಾಲ್ಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಮುಂತಾದ ಗೌರವಗಳಿಗೆ ಪಾತ್ರರಾಗಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯು 2018ರ ಸಾಲಿನ ಬಾಲ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಿದೆ. ‘ಚಿಣ್ಣರ ಅಜ್ಜ’ (ಆಭಿನಂದನಾ ಗ್ರಂಥ-2015) ಸಮರ್ಪಣೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-2014, ಕರ್ನಾಟಕ ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ-2017, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಗೌರವ ಪ್ರಶಸ್ತಿ-2017 ಹೀಗೆ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.