ಮಂಗಳೂರಿನ ಖ್ಯಾತ ಮುದ್ರಣ ವಿನ್ಯಾಸಕರಾಗಿರುವ ಕಲ್ಲೂರು ನಾಗೇಶ ಅವರು ತಮ್ಮ 'ಆಕೃತಿ ಪ್ರಿಂಟ್ಸ್' ಮುದ್ರಣ ಸಂಸ್ಥೆ ಮತ್ತು 'ಆಕೃತಿ ಆಶಯ ಪಬ್ಲಿಕೇಶನ್' ಮೂಲಕ ಪುಸ್ತಕ ಸಂಸ್ಕೃತಿ ಹರಡುತ್ತಿದ್ದಾರೆ. ತಮ್ಮ ಸಾಮಾಜಿಕ ಕಾಳಜಿಗಳಿಂದಾಗಿ ಪಗತಿಶೀಲ ಚಿಂತಕರಾಗಿ ಗುರುತಿಸಿಕೊಂಡ ಅವರು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನ, ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ, ಸಮದರ್ಶಿ ವೇದಿಕೆ, ಚಿತ್ತಾರ ಬಳಗ - ಮುಂತಾದ ಸಂಸ್ಥೆಗಳಲ್ಲಿ ಜನಪರ ಕೆಲಸ ಮಾಡುತ್ತಿದ್ದಾರೆ. ಪುಸ್ತಕ ವಿನ್ಯಾಸವೂ ಕಲೆಯೇ ಎಂಬುದನ್ನು ಕಾಣಿಸಿದ ನಾಗೇಶ ಅವರಿಗೆ ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ರಾಜ್ಯ ಮಟ್ಟದ 'ಪುಸ್ತಕ ಸೊಗಸು' ಬಹುಮಾನವನ್ನು ಸತತ ನಾಲ್ಕು ವರ್ಷ ದೊರೆತಿದೆ.
'ಕಾಂತಾವರ ಲಲಿತ ಕಲಾ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕಳತ್ತೂರು ಕುಶಲಶೇಖರ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಸನ್ಮಾನ, ಕಾಂತಾವರ ಕನ್ನಡ ಸಂಘ ಪುರಸ್ಕಾರ ಪಡೆದಿರುವ ನಾಗೇಶ ಅವರು ಲೇಖಕರೂ ಕೂಡ. ಕಲ್ಲೂರು ನಾಗೇಶ ಅವರು ನಾಡಿಗೆ ನಮಸ್ಕಾರ ಮಾಲೆಗಾಗಿ “ಕೀಕಾನ ರಾಮಚಂದ್ರ, 'ಕಾಪು ಮುದ್ದಣ್ಣ ಶೆಟ್ಟಿ' ಕೃತಿ ಬರೆದಿದ್ದಾರೆ. ಕಾಂತಾವರ ಕನ್ನಡ ಸಂಘದ 40 ವರ್ಷಗಳ ಚಟುವಟಿಕೆಗಳ ದಾಖಲಾತಿಯ 'ಸಂಘ ಜಂಗಮ' ಮಹಾಸಂಪುಟದ ಸಹ ಸಂಪಾದಕರಾಗಿಯೂ ದುಡಿದವರು. ಕಾಂತಾವರ ಕನ್ನಡ ಸಂಘದ 'ನಾಡಿಗೆ ನಮಸ್ಕಾರ' ಮಾಲೆಯ ಸಲಹಾ ಸಮಿತಿ ಸದಸ್ಯರೂ, ಅಲ್ಲಮಪ್ರಭು ಪೀಠದ ನಿರ್ದೆಶಕರೂ ಆಗಿದ್ದಾರೆ.