ಹಿರಿಯ ಪತ್ರಕರ್ತ, ರಂಗಭೂಮಿ ಕಲಾವಿದ ಕೆ. ಪ್ರಹ್ಲಾದರಾವ್ ಅವರು ಕಳೆದ 60 ವರ್ಷಗಳಿಂದ ಮಂಡ್ಯದಲ್ಲಿ ನೆಲೆಸಿದ್ದಾರೆ. ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ 41 ವರ್ಷ ಸೇವೆ ಸಲ್ಲಿಸಿದ್ದರು. ಪೌರವಾಣಿ ಪತ್ರಿಕೆ ಸಂಪಾದಕರಾಗಿದ್ದ ಕೆ. ಗುಂಡಣ್ಣನವರ ಎಲ್ಲ ನಾಟಕಗಳನ್ನು ರಂಗದ ಮೇಲೆ ತರುವಲ್ಲಿ ಯಶಸ್ವಿಯಾಗಿದ್ದರು. ವರನಟ ಡಾ. ರಾಜ್‍ಕುಮಾರ್ ಸೇರಿದಂತೆ ಕನ್ನಡ ಹಾಗೂ ಹಿಂದಿಯ ಅನೇಕ ಚಿತ್ರಕಲಾವಿದರನ್ನು ಮಂಡ್ಯಕ್ಕೆ ಕರೆತಂದು ಗೌರವಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಸಂಸ್ಕೃತಿ ಸಂಘಟನೆಯ ಅಧ್ಯಕ್ಷರಾಗಿದ್ದ ರಾಯರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು, ಪ್ರಕಾಶ್ ಕಲಾ ಸಂಘ, ಕರ್ನಾಟಕ ಸಂಘ, ಕೆ.ವಿ. ನಾಟಕೋತ್ಸವ ಸಮಿತಿ, ಜಿಲ್ಲಾ ಗ್ರಂಥಾಲಯ ಸಮಿತಿ, ಸಾಕ್ಷರತಾ ಸಮಿತಿ, ಸಂಸ್ಕಾರ ಭಾರತಿ, ಸಿರಿಗನ್ನಡ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಪೌರವಾಣಿ ಪತ್ರಿಕೆ, ಕೊಳಲು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ ಬಳಿಕ ಉದಯ ಟಿ.ವಿ. ವರದಿಗಾರರಾಗಿ ಸುಮಾರು ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ನಾಟಕ ಅಕಾಡೆಮಿ, ಜಿಲ್ಲಾ ಕನ್ನಡ ರಾಜ್ಯೋತ್ಸವ, ಸುವರ್ಣ ಕರ್ನಾಟಕ, ಕೆ.ವಿ. ಶಂಕರಗೌಡ ಸಾಂಸ್ಕೃತಿಕ ಪರಿಷತ್ತು ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಘ ಸಂಸ್ಥೆಗಳ ಪ್ರಶಸ್ತಿಗಳು ಇವರಿಗೆ ಲಭಿಸಿದ್ದವು. ಮಂಡ್ಯದಲ್ಲಿ ಕೌಶಿಕ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಪ್ರಾರಂಭಕ್ಕೆ ಕಾರಣರಾಗಿದ್ದರು. ಅತ್ಯುತ್ತಮ ರಂಗಕಲಾವಿದರಾಗಿ, ಸಂಘಟಕರಾಗಿಯೂ ಕೆಲಸ ಮಾಡಿ ಜನಮನ್ನಣೆ ಗಳಿಸಿದ್ದರು. ಇತ್ತೀಚೆಗೆ ಸಂಸ್ಕೃತಿ ಸಿರಿ ಎಂಬ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಲಾಗಿತ್ತು.