ಡಾ.ಅಶೋಕ್ ಪೈ ಮನೋವೈದ್ಯರು. ಬರಹಗಾರರು. ಚಲನಚಿತ್ರ ನಿರ್ಮಾಪಕರು. ತಂದೆ ಕಟೀಲು ಅಪ್ಪು ಪೈ, ತಾಯಿ ವಿನೋದಿನಿ ಪೈ. 1946ರ ಡಿಸೆಂಬರ್ 30 ರಂದು ಜನಿಸಿದರು. ಶಿವಮೊಗ್ಗದಲ್ಲಿ ಮನೋರೋಗಿಗಳ ಶುಶ್ರೂಷೆಗೆ ಮಾನಸ ನರ್ಸಿಂಗ್ ಹೋಮ್ ಹಾಗೂ ಮಾನಸ ಎಜುಕೇಶನ್ ಫೌಂಡೇಶನ್ ಸ್ಥಾಪಿಸಿದರು. ಪತ್ನಿ ಡಾ. ರಜನಿ ಪೈ ಅವರೊಂದಿಗೆ ಮನಃಶಾಸ್ತ್ರದ ಆಳಸ್ಪರ್ಶವುಳ್ಳ ತಮ್ಮದೇ ಕತೆಗಳನ್ನು ಆಧರಿಸಿದ ಉಷಾಕಿರಣ, ಆಘಾತ, ಮನಮಂಥನ ಮೊದಲಾದ ಚಲನಚಿತ್ರಗಳನ್ನು ನಿರ್ಮಿಸಿದ್ದರು.
ನಾ. ಡಿಸೋಜ ಕಾದಂಬರಿ ಆಧಾರಿತ 'ಕಾಡಿನ ಬೆಂಕಿ' ಚಿತ್ರ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗಳಿಸಿತ್ತು. ಉಷಾಕಿರಣ ಚಿತ್ರಕ್ಕೆ ಫಿಲಂ ಫೇರ್ ಪ್ರಶಸ್ತಿ ಹಾಗೂ ಆಘಾತ ಚಿತ್ರಕ್ಕೆ ರಾಜ್ಯಪ್ರಶಸ್ತಿ ಸಂದಿತ್ತು. 'ಅಂತರಾಳ' ಎಂಬ ಕಿರುತೆರೆಯ ಧಾರಾವಾಹಿಯನ್ನು ಕೂಡಾ ನಿರ್ಮಿಸಿದ್ದರು.
ಎಲ್ಲ ವರ್ಗೀಯ ಮಹನೀಯರೂ ತಮ್ಮ ಪ್ರದೇಶದಲ್ಲಿ ಕಂಡು ಬಂದ ರೋಗಿಗಳನ್ನೆಲ್ಲಾ ಡಾ. ಅಶೋಕ್ ಪೈ ಅವರ ಮಾರ್ಗದರ್ಶನಕ್ಕೆ ಹೋಗುವಂತೆ ಪ್ರೇರೇಪಿಸಿ, ಈ ಮೂಲಕ ಮನೋರೋಗಿಗಳು ಮಂತ್ರವಾದಿಗಳು ಮತ್ತು ಕಪಟ ವೈದ್ಯರ ಕೈಗೆ ಸಿಲುಕುವ ಅಪಾಯವನ್ನು ತಪ್ಪಿಸುವ ಒಂದು ಸ್ವಯಂಚಾಲಿತ ಸಮುದಾಯವೇ ಮಲೆನಾಡು ಪ್ರದೇಶದಲ್ಲಿ ಸೃಷ್ಟಿಗೊಂಡಿತ್ತು.
ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಮುಖ್ಯಸ್ಥರಾಗಿದ್ದರು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಮನೋವೈಜ್ಞಾನಿಕ ಲೇಖನಗಳನ್ನೂಬರೆದರು. ಕರ್ನಾಟಕ ಮಾನಸಿಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಡಾ. ಬಿ.ಸಿ. ರಾಯ್ ಪ್ರಶಸ್ತಿ, ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಸಂದಿದ್ದವು.
2016ರ ಸೆಪ್ಟೆಂಬರ್ 29ರಂದು ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ಪತ್ನಿ ರಜನಿ ಪೈ ಅವರ ಜತೆಗೆ ಸ್ಕಾಟ್ಲೆಂಡಿಗೆ ಹೋಗಿದ್ದಾಗ ಹೃದಯಾಘಾತದಿಂದ ನಿಧನರಾದರು.