ಜಯಲಕ್ಷ್ಮಿ ಪಾಟೀಲ್ ಅವರು ಬಹುಮುಖ ಪ್ರತಿಭೆಯ ಕಲಾವಿದೆ. ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿಯಾಗಿಯೂ ಕಾರ್ಯ ಸಾಧಿಸಿದ್ದಾರೆ. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರಾದ ಜಯಲಕ್ಷ್ಮಿ ಗುಲ್ಬರ್ಗಾ ಜಿಲ್ಲೆ ಯಾದಗಿರಿಯಲ್ಲಿ 968 ಜೂನ್ 08ರಂದು ಜನಿಸಿದರು. ತಂದೆ ರಾಜಶೇಖರ ಅವರಾದಿ, ನಿವೃತ್ತ ಸರಕಾರಿ ವೈದ್ಯಾಧಿಕಾರಿ. ತಾಯಿ, ಸರೋಜಿನಿ ಅವರಾದಿ. ಜಯಲಕ್ಷ್ಮಿ ಪಾಟೀಲ್ ಬಿಜಾಪುರದ 'ಕೆ.ಸಿ.ಪಿ.ಸೈನ್ಸ್ ಕಾಲೇಜ್' ನಲ್ಲಿ ಬಿ.ಎಸ್ಸಿ ಪದವಿ ಗಳಿಸಿದರು.
ನೀಲ ಕಡಲ ಭಾನು' ಅವರ ಕವನ ಸಂಕಲನ. ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ಸಂಪಾದನೆ. ಗ್ರಾಮೀಣ ಬದುಕು, ಅಲ್ಲಿನ ಸಂಸ್ಕೃತಿಯನ್ನು ಚಿತ್ರಿಸುವ ಅವರ ಕಾದಂಬರಿ ‘ಮುಕ್ಕು ಚಿಕ್ಕಿಯ ಕಾಳು’ 2018ರಲ್ಲಿ ಪ್ರಕಟವಾಯಿತು. ವಿಜಯ್ ತೆಂಡೂಲ್ಕರ್ ಅವರು ಬರೆದ ಮರಾಠಿ ಮೂಲದ ನಾಟಕ 'ಬೇಬಿ'ಯನ್ನು ಕನ್ನಡಕ್ಕೆ ಅನುವಾದಿಸಿದ್ದು 2018ರಲ್ಲಿ ಪ್ರಕಟಗೊಂಡಿದೆ.
'ಈ ಹೊತ್ತಿಗೆ' ಸಂಸ್ಥೆಯು ಕನ್ನಡ ಸಾಹಿತ್ಯ ಕೃತಿಗಳ ಚರ್ಚೆಯ ಮಾಸಿಕ ವೇದಿಕೆ. ಇದರ ಸಂಸ್ಥಾಪಕಿ ಇವರು. 'ಈ ಹೊತ್ತಿಗೆ' ಕಾರ್ಯಕ್ರಮದಲ್ಲಿ ಆ ತಿಂಗಳ ಆಯ್ದ ಪುಸ್ತಕವನ್ನು ಓದಿದವರಷ್ಟೇ ಚರ್ಚೆಯಲ್ಲಿ ಭಾಗವಹಿಸುವುದು ಈ ಕಾರ್ಯಕ್ರಮದ ಮತ್ತೊಂದು ವಿಶೇಷತೆ ಹಾಗೂ ಈ ಮೂಲಕ ಅವರು ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ ಓದುವ ಅಭಿರುಚಿಯನ್ನು ಬೆಳೆಸುವ ಕೈಂಕರ್ಯ ಮಾಡುತ್ತಿದ್ದಾರೆ.
'ಜನದನಿ' (ಲೈಂಗಿಕ ದೌರ್ಜನ್ಯಗಳ ವಿರುದ್ಧ ಹೋರಾಡ್ತಿರೊ ಸಂಸ್ಥೆ)ಯ ಸಂಸ್ಥಾಪಕಿಯೂ ಹೌದು. ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಸಾಮಾಜಿಕ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೇಳಬೇಕೆನಿಸುತ್ತಿದೆ' ಮತ್ತು 'ಅಭಿನಯ' ಇವರ ಬ್ಲಾಗ್ ಗಳು.
ಕೇರಳ ರಾಜ್ಯ ಅಕಾಡೆಮಿ ಮತ್ತು ಪಂಪ (People for performing Arts & more) ಸಂಸ್ಥೆಯ ಸಂಯುಕ್ತ ಆಯೋಜನೆಯಲ್ಲಿ ಕೇರಳದ ಚೆಂಗನೂರಿನಲ್ಲಿ ನಡೆದ 'SIWI-2014'(South India Writers Ensemble) ಸಂಸ್ಥೆಗಳ ಆಮಂತ್ರಣದ ಮೇರೆಗೆ, 2014 ಜುಲೈ 24 ರಂದು ಮತ್ತು SIWE 2017ರ SIWE ಸಮ್ಮೇಳನದಲ್ಲಿ ಕವಿ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಇವರ ಸಾಧನೆಗೆ ರಂಗಭೂಮಿಯಲ್ಲಿ, 'ಮಾಟುಂಗಾ ಕರ್ನಾಟಕ ಸಂಘ ಮುಂಬಯಿ, ಆಯೋಜಿಸಿದ್ದ 'ಅಖಿಲ ಭಾರತೀಯ ಕುವೆಂಪು ನಾಟಕ ಸ್ಪರ್ಧೆ'ಯಲ್ಲಿ ನಾ ಕೊಂದ ಹುಡುಗ ನಾಟಕದಲ್ಲಿನ ಅಭಿನಯಕ್ಕಾಗಿ, ಪ್ರತಿಷ್ಠಿತ ಭಾರತಿ ಕೊಡ್ಲೇಕರ್ ಪ್ರಶಸ್ತಿ, ಒಸರ್ ತುಳು ನಾಟಕಕ್ಕೆ ‘ಅಭಿನಯ ಶಾರದೆ ಪ್ರಶಸ್ತಿ', ಸಾಹಿತ್ಯ ಕ್ಷೇತ್ರದಲ್ಲಿ ಇವರ 'ಹಕ್ಕಿ' ಕವನಕ್ಕೆ 'ಮುಂಬಯಿ ಬೆಳಕು ಕನ್ನಡ ಬಳಗ'ದ ಡೊಂಬಿವಲಿ ಸಂಸ್ಥೆಯಿಂದ 'ಡಾ.ದ.ರಾ.ಬೇಂದ್ರೆ ಪ್ರಶಸ್ತಿ' ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಅವರಿಗೆ ಸಂದಿವೆ.