ಹ.ಮ.ಪೂಜಾರ ಅವರು (ಜನನ: 13-03-1943) ಹುಟ್ಟಿದ್ದು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ. ತಂದೆ ಮನ್ನೆಪ್ಪ ಪೂಜಾರ, ತಾಯಿ ಗುರುಬಾಯಿ. ಸಿಂದಗಿಯಲ್ಲಿ ಪ್ರೌಢಶಿಕ್ಷಣ, ಕವಿವಿಯಿಂದ ಬಿ.ಎ.ಪದವೀಧರರು. ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಬಾಹ್ಯ ವಿದ್ಯಾರ್ಥಿಯಾಗಿ ಪಡೆದ ಬಿ.ಎಡ್. ಪದವೀಧರರು. ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಪ್ರೌಢಶಾಲಾ ಶಿಕ್ಷಕರಾಗಿ2001ರಲ್ಲಿ ನಿವೃತ್ತಿಯಾದರು. 1975ರಲ್ಲಿ ಸಿಂದಗಿಯಲ್ಲಿ ಚಾಚಾ ನೆಹರು ವಿಜ್ಞಾನ ಮಂಡಳ ಸ್ಥಾಪಿಸಿದರು. ನಂತರ 1976 ರಲ್ಲಿ ‘ಮಕ್ಕಳ ಬಳಗ’ ಸ್ಥಾಪಿಸಿದರು. ಪರಿಶಿಷ್ಟಜಾತಿ ಮತ್ತು ಪರಿಶಿಷ್ಟವರ್ಗದ ಮಕ್ಕಳಿಗೆ 15 ವರ್ಷ ಕಾಲ ಉಚಿತ ತರಗತಿಗಳು ನಡೆಸಿದರು.
ಕಥಾ ಸಂಕಲನಗಳಾದ ‘ನೀತಿಯ ಬದುಕು’, ‘ಪರೋಪಕಾರ’, ‘ತುಂಟ ಮಂಗ’, ‘ಪರಿಸರ’ ಎಂಬುದು ಮಕ್ಕಳ ಕವಿತೆಗಳ ಸಂಕಲನ. ವ್ಯಕ್ತಿ ಚಿತ್ರಣದ ಕೃತಿ ‘ಕಾಯಕ ಯೋಗಿ ಚನ್ನ ವೀರ ಸ್ವಾಮಿಗಳು’. ಸಂಪಾದಿಸಿರುವ ಇತರ ಕೃತಿಗಳು: ಶೈಕ್ಷಣಿಕ ಸಮ್ಮೇಳನದ ಸಂಸ್ಮರಣ ಗ್ರಂಥ ‘ರಸ ಕಿರಣ’, ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಂಸ್ಮರಣ ಗ್ರಂಥ ‘ವಿಜಯ ವಾಣಿ’, ಜಿಲ್ಲಾ ಮಕ್ಕಳ ಸಾಹಿತ್ಯ ಸಮೀಕ್ಷೆ ‘ಚಿಣ್ಣರ ಚೇತನ’, ಸಂಗೀತ ಕುರಿತಾದ ಲೇಖನಗಳ ಸಂಕಲನ ‘ಪಂಚಾಕ್ಷರಿ ಪ್ರಭೆ’, ಸ್ಪರ್ಧೆಗಾಗಿ ಮಕ್ಕಳ ಸಾಹಿತಿಗಳು ಬರೆದ ಕಥೆ, ಕವನಗಳ ಸಂಕಲನ ‘ಪುಟ್ಟ ಕಾಣಿಕೆ’ ಮತ್ತು ‘ಸುವರ್ಣ ಸಂಭ್ರಮ’ ಇತ್ಯಾದಿ
ಪ್ರಶಸ್ತಿ-ಗೌರವಗಳು: ಕರ್ನಾಟಕ ಶಿಕ್ಷಕರ ಪ್ರಶಸ್ತಿ, ರಾಜ್ಯ ಶಿಕ್ಷಕ ಪ್ರಶಸ್ತಿ, ಕೇಂದ್ರ ಸರಕಾರದಿಂದ ಉತ್ತಮ ರಾಷ್ಟ್ರ ಶಿಕ್ಷಕ ಪ್ರಶಸ್ತಿ , ನೀತಿಯ ಬದುಕು ಕೃತಿಗೆ ಮೂರು ಸಾವಿರ ಮಠದ ಪ್ರಶಸ್ತಿ, ಪರಿಸರ ಕೃತಿಗೆ ವಿಜಾಪುರ ಮಕ್ಕಳ ಸಾಹಿತ್ಯ ಸಂಗಮದಿಂದ ಸಾಹಿತ್ಯ ಪ್ರಶಸ್ತಿ, ಬನಹಟ್ಟಿಯ ಮಹಾದೇವಪ್ಪ ಕರ್ಲಟ್ಟಿ ಪ್ರಶಸ್ತಿ, ಬೆಳಗಾವಿಯ ಕಾರಂಜಿ ಮಠದಿಂದ ಡೆಪ್ಯುಟಿ ಚೆನ್ನಬಸಪ್ಪ ಪ್ರಶಸ್ತಿ, ವಿಜಯ ಪ್ರಕಾಶನ ನಾಲತವಾಡ ಇವರಿಂದ ‘ಶ್ರೀ ಗುರು’, ಧಾರವಾಡದ ಚಿಲಿಪಿಲಿ ಪ್ರಕಾಶನದ ‘ಶಿಕ್ಷಣ ಸಿರಿ’, ಉಜ್ವಲ ಸಂಸ್ಥೆಯಿಂದ ‘ಮಕ್ಕಳ ಮಿತ್ರ’ ಪ್ರಶಸ್ತಿಗಳು ದೊರೆತಿವೆ.