ಕನ್ನಡ ರಂಗಭೂಮಿಯಲ್ಲಿ ’ಸುಬ್ಬಣ್ಣ’ ಎಂದೇ ಜನಪ್ರಿಯರಿರುವ ಎಚ್.ವಿ. ವೆಂಕಟಸುಬ್ಬಯ್ಯ ಅವರು ಹುಟ್ಟಿದ್ದು 1936ರಲ್ಲಿ. ಮೂಲತಃ ಮೈಸೂರಿನ ಹಂಪಾಪುರದವರಾದ ವೆಂಕಟಸುಬ್ಬಯ್ಯ ಅವರು ಸೌಂಡ್ ಎಂಜಿನಿಯರಿಂಗ್ ಮತ್ತು ನಾಟಕ ಕಲೆಯಲ್ಲಿ ಡಿಪ್ಲೊಮಾ ಮಾಡಿದ್ದರು. ಎಲ್.ಆರ್. ಡಿ.ಇ.ಯಲ್ಲಿ ತಾಂತ್ರಿಕ ಅಧಿಕಾರಿಯಾಗಿ 1996ರ ತನಕ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ವೆಂಕಟಸುಬ್ಬಯ್ಯ ಅವರಿಗೆ 2014ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
1950ರಿಂದ ಕನ್ನಡ ರಂಗಭೂಮಿಯ ಭಾಗವಾಗಿರುವ ಹಿರಿಯ ರಂಗಕರ್ಮಿ ’ಸುಬ್ಬಣ್ಣ’ ಅವರು ರಂಗಭೂಮಿ, ರಂಗಭೂಮಿಯ ಕಲಾವಿದರು, ರಂಗಭೂಮಿಯ ತಂತ್ರಜ್ಞಾನ ಕುರಿತ ಯಾವುದೇ ಪ್ರಶ್ನೆಗೂ ಸುದೀರ್ಘ ಉತ್ತರ ನೀಡಬಲ್ಲರು.
ಪ್ರದರ್ಶನ ಕಲೆಗಳ ಅಭಿವ್ಯಕ್ತಿಯ ಸೃಜನಶೀಲತೆ ಮತ್ತು ಅಕಡೆಮಿಕ್ ಜ್ಞಾನ ಎರಡರಲ್ಲೂ ಅಪರೂಪದ ಕೆಲಸ ಮಾಡಿರುವ ವೆಂಕಟಸುಬ್ಬಯ್ಯ ಅವರು ಆಧುನಿಕ ಕನ್ನಡ ರಂಗಭೂಮಿಯ ಪ್ರಮುಖ. ಪರ್ವತವಾಣಿ, ಶ್ರೀರಂಗ, ನಾಣಿ, ಎಚ್.ಕೆ. ರಂಗನಾಥ್, ಕಾರ್ನಾಡ್, ಕಾರಂತ, ಕಂಬಾರ, ನಾಗೇಶ್, ಸಿ.ಜಿ.ಕೆ ಮುಂತಾದ ದಿಗ್ಗಜರ ಜೊತೆಗೆ ಇದ್ದು ಕೆಲಸ ಮಾಡಿರುವ ಇವರು ಆಧುನಿಕ ಕನ್ನಡ ರಂಗಭೂಮಿಯ ಸಾಕ್ಷಿಪ್ರಜ್ಞೆ.
ವೆಂಕಟಸುಬ್ಬಯ್ಯನವರಿಗೆ ರಂಗಭೂಮಿಯ ಕುರಿತು ಮಾಹಿತಿ ಸಂಗ್ರಹಿಸಿ, ದಾಖಲಿಸುವ ಹವ್ಯಾಸ ಇದೆ. ನಾಟಕಕಾರ ಶ್ರೀರಂಗರ ಬಗ್ಗೆ ಅಪಾರ ಪ್ರೀತಿ-ಗೌರವ ಇರುವ ವೆಂಕಟಸುಬ್ಬಯ್ಯ ಅವರು ಆದ್ಯರನ್ನು ಪ್ರಮುಖ ಗ್ರಂಥ ಪ್ರಕಟಿಸಿದ್ದಾರೆ.