ಎಚ್.ನರಸಿಂಹಯ್ಯನವರು ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಜನಿಸಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಹಿಂದುಳಿದ ಬಡಕುಟುಂಬದಲ್ಲಿ ಜನಿಸಿದ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸವನ್ನು ಹೊಸೂರಿನಲ್ಲಿಯೇ ಮುಗಿಸಿದರು. 1935ರಲ್ಲಿ ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿಗೆ ಸೇರಿದರು. ಭೌತಶಾಸ್ತ್ರದ ಬಿ.ಎಸ್ಸಿ. (ಆನರ್ಸ್) ಮತ್ತು ಎಂ.ಎಸ್ಸಿ., ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿದರು. ಎಲ್ಲಾ ಪರೀಕ್ಷೆಗಳಲ್ಲಿ ಉನ್ನತ (ಪ್ರಥಮ) ದರ್ಜೆಯಲ್ಲಿ ಉತ್ತೀರ್ಣರಾದರು.
1946ರಲ್ಲಿ ಬೆಂಗಳೂರು ಬಸವನಗುಡಿ ಕಾಲೇಜಿನಲ್ಲಿ ಭೌತಶಾಸ್ತ್ರ ಅಧ್ಯಾಪಕರಾದರು. ಅಲ್ಲಿಯೇ ಪ್ರಾಧ್ಯಾಪಕರಾಗಿ, ಆಮೇಲೆ ಹನ್ನೆರಡು ವರ್ಷಗಳು ಪ್ರಿನ್ಸಿಪಾಲರಾಗಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದಾರೆ, ಅವರ ಕಾಲದಲ್ಲಿ ಹಲವು ಮಹತ್ತರ ಕಾರ್ಯಗಳ ಸಾಧನೆ. ಎಚ್.ಎನ್., ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ಅಧ್ಯಕ್ಷರಾಗಿದ್ದರು.