ಹಿರಿಯ ಕವಿ, ಕಥೆಗಾರ, ಚಿಂತಕ ಜಿ.ಎಸ್. ಉಬರಡ್ಕ ಅವರ ಪೂರ್ಣ ಹೆಸರು ಗಣಪತಿ ಸುಬ್ರಹ್ಮಣ್ಯ ಉಬರಡ್ಕ. ಸುಳ್ಯ ತಾಲೂಕಿನ ಉಬರಡ್ಕದವರಾದ ಅವರು ಕಳೆದ ಏಳು ದಶಕಗಳಿಂದ ನೆಲ್ಲೂರು ಕೆಮ್ರಾಜೆ ಗ್ರಾಮದ ನಾರ್ಣಕಜೆ ನಿವಾಸಿ. ಸಂಸ್ಕೃತ ಕಾವ್ಯ ಮತ್ತು ಕನ್ನಡ ಎಂ.ಎ. ಪದವಿ ಪಡೆದಿವರು ಅವರು ತೋಟಗಾರಿಕೆ ಹಾಗೂ ಸಾಹಿತ್ಯ ಕೃಷಿ ನಿರತರು. ಸಾಹಿತ್ಯದಲ್ಲಿ ಕಾವ್ಯ ಅವರ ಮೊದಲ ಆಯ್ಕೆ. ಕಥೆ, ಪ್ರಬಂಧ, ಜಾನಪದ ಕ್ಷೇತ್ರದಲ್ಲಿಯೂ ಕೃತಿ ರಚನೆ ಮಾಡಿದ್ದಾರೆ. ಕ್ಯೂ ನಿಂತ ಪಾಶಗಳು, ಅರಣ್ಯ ಕಾಂಡ, ಹನಿ ಹನಿ ಸೂರ್ಯ, ಹೂ ಬಿಟ್ಟ ಮರದಲ್ಲಿ ಅವರ ಕವನ ಸಂಕಲನಗಳು. ಮೊಗ್ಗೊಡೆದ ಮೌನ ಕವನ ಸಂಕಲನಕ್ಕೆ ಪೆರ್ಲ ಕಾವ್ಯ ಪ್ರಶಸ್ತಿ, ಭೂಮಿ ತೂಗುವ ಹಕ್ಕಿ ಕವನ ಸಂಕಲನಕ್ಕೆ ಮುದ್ದಣ ಕಾವ್ಯ ಪ್ರಶಸ್ತಿ ದೊರೆತಿವೆ. ಚಿಕ್ಕದೊಂದು ಗಿಳಿಯ ಸಾಕಿ ಕಥಾ ಸಂಕಲನ. ತರಾವಳಿ ಲೇಖನಗಳ ಸಂಕಲನ. ಸಿರಿಗಂಧ ಸೂಸ್ಯಾವೆ ಜನಪದ ಗೀತ ಸಂಗ್ರಹ - ಒಟ್ಟು ಒಂಬತ್ತು ಕೃತಿ ಪ್ರಕಟಿಸಿದ್ದಾರೆ. ಸುಳ್ಯ ತಾಲೂಕಿನ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಅವರು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.