ಶರಣ ಹಾಗೂ ದಾಸ ಸಾಹಿತ್ಯ ಅಧ್ಯಯನ ಮಾಡಿರುವ ಜಿ. ಕೆ. ಶಿವಣ್ಣ ಅವರು 90ರ ದಶಕದಲ್ಲಿಯೇ ಶರಣರ ವಚನಗಳಿಗೆ ಮೊದಲ 100 ಚಿತ್ರಗಳ ಸರಣಿ ರಚಿಸಿದವರು. ದಾಸ ಸಾಹಿತ್ಯಕ್ಕೂ ಅನೇಕ ಕಲಾಕೃತಿಗಳನ್ನು ರಚಿಸಿದ್ದಾರೆ. ನಾಡಿನಾದ್ಯಂತ ಏಕವ್ಯಕ್ತಿ ಪ್ರದರ್ಶನ ನೀಡಿ ರೇಖಾಚಿತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದು, ಜಲವರ್ಣದ ವಾಷ್ ತಂತ್ರದಲ್ಲಿ ಪರಿಣಿತರು.
ಸಾಹಿತ್ಯ, ಸಂಗೀತ ನಾಟಕ, ಸಿನಿಮಾ ಅವರ ಆಸಕ್ತಿಯ ಕ್ಷೇತ್ರಗಳು. ಸುಧಾ, ತರಂಗ, ಮಯೂರ, ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಲ್ಲಿ ಅವರ ಕಲಾಕೃತಿಗಳು ಪ್ರಕಟವಾಗಿವೆ. ಕಲೆಗೆ ಸಂಬಂಧಿಸಿದ ಅವರ ಅನೇಕ ಬರಹಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸುವ ಶಿಕ್ಷಣವಾರ್ತೆಯಲ್ಲಿ ಸಂಪಾದಕರಾಗಿ, ಕಲಾವಿದರಾಗಿ ಸುಮಾರು 18 ವರ್ಷಗಳ ಸೇವೆ ಸಲ್ಲಿಸಿ 2019ರಲ್ಲಿ ನಿವೃತ್ತರಾದರು.
1999 ರಲ್ಲಿ ಗೌತಮ ಬುದ್ದ ಪ್ರಶಸ್ತಿ, 2000ರಲ್ಲಿ ಇಂಟರ್‌ನ್ಯಾಷನಲ್ ಬಯೋಗ್ರಫಿಕಲ್ ಪ್ರಶಸ್ತಿ, ಕಲಾ ರತ್ನ ಪ್ರಶಸ್ತಿ, ಬೆಳಕು ಸಾಧಕ ಬಂಧು ಪ್ರಶಸ್ತಿ, ಕಲಾ ಸಾರಥಿ ಪ್ರಶಸ್ತಿ, ವಚನ ರೇಖಾಚಿತ್ರ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮುಂತಾದ ಬಹುಮಾನಗಳಿಗೆ ಭಾಜನರಾಗಿದ್ದಾರೆ. ಪ್ರಸ್ತುತ ರಾಗಮಾಲ ಚಿತ್ರಗಳ ಮೇಲೆ ವಿಶೇಷ ಅಧ್ಯಯನ ಕೈಗೊಂಡಿದ್ದಾರೆ.